ಬೆಂಗಳೂರು: ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ನಗರದಲ್ಲಿ ಶನಿವಾರ ವಿವಿಧ ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದುತ್ತಿದ್ದ ಹಾಗೂ ಗುಟ್ಕಾ ಉಗುಳಿದವರನ್ನು ಪತ್ತೆಹಚ್ಚಿ ದಂಡ ವಿಧಿಸಿದರು.
ಅನುಮತಿ ಪಡೆಯದೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಯ ಮೇಲೆ ದಾಳಿ ನಡೆಸಿ ಉತ್ಪನ್ನಗಳನ್ನು ಜಪ್ತಿ ಮಾಡಿಕೊಂಡರು. ಕೇಂದ್ರ, ಈಶಾನ್ಯ, ಪಶ್ಚಿಮ, ಆಗ್ನೇಯ, ಉತ್ತರ ಹಾಗೂ ದಕ್ಷಿಣ ವಿಭಾಗದ ಪೊಲೀಸರು ತಮ್ಮ ಭಾಗದಲ್ಲಿ ಕಾರ್ಯಾಚರಣೆ ನಡೆಸಿದರು. 200ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡರು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಹಾಗೂ ಗುಟ್ಕಾ ಉಗುಳಿದವರಿಗೆ ₹1 ಸಾವಿರ ದಂಡ ವಿಧಿಸಲಾಯಿತು.
ಸಾರ್ವಜನಿಕರ ಆರೋಗ್ಯ ಕಾಪಾಡುವ ಹಾಗೂ ತಂಬಾಕು ನಿಯಂತ್ರಣ ಕಾನೂನುಗಳ ಪಾಲನೆಯನ್ನು ಖಾತ್ರಿ ಪಡಿಸಲು ನಗರದಾದ್ಯಂತ ಪೊಲೀಸರು ಅರಿವು ಮೂಡಿಸಿದರು. ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಬೇಕಾದರೆ ಬಿಬಿಎಂಪಿಯಿಂದ ಮಾರಾಟಗಾರರು ಪರವಾನಗಿ ಪಡೆದುಕೊಳ್ಳಬೇಕು ಎಂದು ಪೊಲೀಸರು ಸೂಚನೆ ನೀಡಿದರು.
‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ಬಾಲಕರಿಗೆ ತಂಬಾಕು ಮಾರಾಟ ಮಾಡುವುದು, ಶಿಕ್ಷಣ ಸಂಸ್ಥೆಗಳ ಬಳಿ ಬೀಡಿ–ಸಿಗರೇಟು ಮಾರಾಟ ಮಾಡುವವರ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗುವುದು’ ಎಂದು ಪೊಲೀಸರು ಹೇಳಿದರು.
‘ಮಾಲ್, ಕಾಫಿ ಬಾರ್‌ಗಳು ಮತ್ತು ಅಂಗಡಿಗಳ ಮೇಲೆ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ, ತಪಾಸಣೆ ನಡೆಸಲಿದ್ದಾರೆ’ ಎಂದು ಹೇಳಿದರು.
‘ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ನಾಗರಿಕರು ಹಾಗೂ ವ್ಯಾಪಾರಿಗಳು ಕಾನೂನು ಪಾಲನೆಗಾಗಿ ಪೊಲೀಸರ ಜತೆಗೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಕೋರಿದರು.
‘ತಂಬಾಕು ಕೇವಲ ಆರೋಗ್ಯವನ್ನಷ್ಟೇ ಹಾಳು ಮಾಡುವುದಿಲ್ಲ. ನಮ್ಮ ಮನೆ, ಭವಿಷ್ಯ ಹಾಗೂ ದೇಶವನ್ನೇ ದುರ್ಬಲಗೊಳಿಸುತ್ತದೆ. ತಂಬಾಕಿನಿಂದ ದೂರವಿದ್ದು, ಆರೋಗ್ಯಕರ ಹಾಗೂ ಉಜ್ವಲ ಭವಿಷ್ಯದತ್ತ ಸಾಗಬೇಕು. ತಂಬಾಕು ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಒಗ್ಗಟ್ಟಾಗಿ ನಿಲ್ಲುತ್ತದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.
ಜಾಗೃತಿಗಾಗಿ ಮ್ಯಾರಥಾನ್
ಬೆಂಗಳೂರು: ಗುಂಜೂರು ಶ್ರೀಶ್ರೀ ರವಿಶಂಕರ್ ವಿದ್ಯಾಮಂದಿರ (ಬೆಂಗಳೂರು ಪೂರ್ವ) ಮಾರತಹಳ್ಳಿ ಪೊಲೀಸ್ ಸಹಯೋಗದಲ್ಲಿ ‘ತಂಬಾಕು ಮುಕ್ತ ಸಮಾಜ’ದ ಜಾಗೃತಿಗಾಗಿ ಶನಿವಾರ 5 ಕಿ.ಮೀ ಮ್ಯಾರಥಾನ್ ನಡೆಯಿತು. ಮಾರತಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾಣಿಕೊಪ್ಪ ಅವರು ಮ್ಯಾರಥಾನ್‌ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ತಂಬಾಕು ಮುಕ್ತ ಸಮಾಜಕ್ಕಾಗಿ ಪ್ರತಿಜ್ಞೆ ಸ್ವೀಕರಿಸಿದರು. ಶಾಲೆಯ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್‌ಎಸ್‌ಆರ್‌ವಿಎಂ ಪ್ರಾಚಾರ್ಯೆ ರೇಷ್ಮಾ ಗಣೇಶ್ ಯೋಗಾನಂದ ಸೋನಾರ್ ಮೋಹನ್ ವೆಂಕಟೇಶ್ ಶ್ರೀಧರ್ ಹಾಜರಿದ್ದರು.
ಸಿಗರೇಟು ಹಾಗೂ ವೇಪ್‌ಗಳನ್ನು ಸೇದುವ ಹವ್ಯಾಸವು ನೋಡಲು ಚೆನ್ನಾಗಿ ಕಾಣಬಹುದು. ಆದರೆ ಅದರ ಪರಿಣಾಮ ಅಪಾಯಕಾರಿ.-ಬಿ.ದಯಾನಂದ, ನಗರ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.