ADVERTISEMENT

ಬೇಸ್‌ಮೆಂಟ್ ಕುಸಿತ; ಎಂಜಿನಿಯರ್‌ಗಳ ಬಂಧನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:08 IST
Last Updated 15 ಜುಲೈ 2019, 19:08 IST
   

ಬೆಂಗಳೂರು: ಕಾಕ್ಸ್‌ ಟೌನ್‌ನಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ ಕುಸಿದು ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸೈಟ್ ಎಂಜಿನಿಯರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ನಯಾಜುಲ್ಲಾ ಹಾಗೂ ತಮೀಮ್ ಬಂಧಿತರು. ಇವರಿಬ್ಬರು ಎರಡೂ ಕಟ್ಟಡಗಳ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದ್ದರು’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ದುರಂತ ಸಂಬಂಧ ನಿವೇಶನ ಹಾಗೂ ಕಟ್ಟಡಗಳ ಮಾಲೀಕರು, ಬಿಬಿಎಂಪಿ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ, ಸೈಟ್‌ ಎಂಜಿನಿಯರ್‌ಗಳು ಮಾತ್ರ ಸಿಕ್ಕಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.

ADVERTISEMENT

ವಿಶೇಷ ತಂಡ ರಚನೆ: ‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಪಾಯ ಸಂಭವಿಸಬಹುದು ಎಂಬ ಪರಿಜ್ಞಾನವಿದ್ದೂ, ತಡೆಯಲು ಕ್ರಮ ಕೈಗೊಳ್ಳದೆ ಉಂಟಾದ ಸಾವು (ಐಪಿಸಿ 304) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಘಟನೆ ವೇಳೆ ಅಪಾರ್ಟ್‌ಮೆಂಟ್‌ನಲ್ಲಿದ್ದ ನಿವಾಸಿಗಳ ಹೇಳಿಕೆ ಪಡೆಯಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.