ADVERTISEMENT

ಬೆಂಗಳೂರು ವಿಭಾಗದಲ್ಲಿ ಅಕ್ರಮಗಳದ್ದೇ ದರ್ಬಾರು

ಪಿಡಬ್ಲ್ಯುಡಿ: ರಾಜು ಅವಧಿಯಲ್ಲಾದ ಕಾಮಗಾರಿಗಳ ಲೆಕ್ಕಪರಿಶೋಧನೆ, ಹಿರಿಯ ಅಧಿಕಾರಿಗಳಿಗೆ ತಲೆನೋವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:02 IST
Last Updated 14 ಮಾರ್ಚ್ 2019, 20:02 IST

ಬೆಂಗಳೂರು: ಲೋಕೋಪಯೋಗಿ ಇಲಾಖೆಯ ಬೆಂಗಳೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಕಚೇರಿ ವ್ಯಾಪ್ತಿಯಲ್ಲಿ ಗುತ್ತಿಗೆ ನಿಯಮಗಳ ಉಲ್ಲಂಘಿಸಿ ಕಾಮಗಾರಿಗಳನ್ನು ನಡೆಸಿದ ಮಾಡಿದ ಪ್ರಕರಣಗಳು ನಡೆದಿವೆ.

2016ರಿಂದ 2019ರ ಮಾರ್ಚ್‌ವರೆಗೆ ಇಲ್ಲಿ ಈ ವ್ಯಾಪ್ತಿಯಲ್ಲಿ ನಡೆದ ಅಂದಾಜು ₹1,500 ಕೋಟಿ ಕಾಮಗಾರಿಗಳಿಗೆ ಸಮರ್ಥನೀಯ ದಾಖಲೆಯೇ ಇಲ್ಲ ಎಂದು ಮೂಲಗಳು ಹೇಳಿವೆ.

2008–09ರ ಅವಧಿಯಲ್ಲಿ ಲೋಕೋಪಯೋಗಿ ಮಾಗಡಿ ಉಪವಿಭಾಗದಲ್ಲಿ ₹600 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿತ್ತು ಎಂಬ ಆರೋಪವನ್ನು ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಮಾಡಿದ್ದರು. ಈ ಬಗ್ಗೆ ಸದನ ಸಮಿತಿ ತನಿಖೆಯೂ ನಡೆದಿತ್ತು.

ADVERTISEMENT

ಪಾರದರ್ಶಕವಾಗಿ ಟೆಂಡರ್ ಕರೆಯುವುದನ್ನು ತಪ್ಪಿಸಲು ₹19 ಲಕ್ಷ ಮೊತ್ತದಲ್ಲಿ ಕಾಮಗಾರಿಗಳನ್ನು ವಿಭಜಿಸಿರುವುದು, ಒಬ್ಬನೇ ಗುತ್ತಿಗೆದಾರನಿಗೆ ಬೇರೆ ಬೇರೆ ಹೆಸರಿನಲ್ಲಿ ಗುತ್ತಿಗೆ ನೀಡಿರುವುದು, ಒಂದೇ ಕಾಮಗಾರಿಗೆ ಬೇರೆ ಬೇರೆ ರೂಪದಲ್ಲಿ 2–3 ಗುತ್ತಿಗೆ ನೀಡಿ ಅಕ್ರಮ ಎಸಗಲಾಗಿದೆ ಎಂದು ಸದನ ಸಮಿತಿ ಹೇಳಿತ್ತು. ಆ ಹಗರಣಕ್ಕಿಂತ ಬೃಹತ್ತಾದ ಅಕ್ರಮ ಈಗ ನಡೆದಿದೆ ಎಂದು ಮೂಲಗಳು ವಿವರಿಸಿವೆ.

ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ಬೆಂಗಳೂರು ಉತ್ತರ ಉಪವಿಭಾಗ, ದಕ್ಷಿಣ ಉಪವಿಭಾಗ,ಆನೇಕಲ್, ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಉಪವಿಭಾಗಗಳು ಇವೆ. ಇಲ್ಲಿ ನಡೆಯುವ ಎಲ್ಲ ಕಾಮಗಾರಿಗಳ ಮೇಲುಸ್ತುವಾರಿ ಕಾರ್ಯಪಾಲಕ ಎಂಜಿನಿಯರ್‌ಗಳಾಗಿದೆ. ಟೆಂಡರ್ ಕರೆಯುವುದು, ಟೆಂಡರ್ ಆಖೈರುಗೊಳಿಸುವುದು, ಕಾರ್ಯಾದೇಶ ನೀಡುವುದು, ಕಾಮಗಾರಿ ಬಳಿಕ ಪರಿಶೀಲನೆ, ಬಿಲ್‌ ಅಂತಿಮಗೊಳಿಸುವುದು ಹೀಗೆ ಎಲ್ಲವೂ ಇವರ ಪರಿಮಿತಿಯೊಳಗೆ ನಡೆಯುತ್ತವೆ.

ಅದರಲ್ಲೂ ಬಜೆಟ್ ಅನುದಾನ ಆಧರಿಸಿ ಕೈಗೊಳ್ಳುವ ಅಪೆಂಡಿಕ್ಸ್–ಸಿ ಕಾಮಗಾರಿಗಳಲ್ಲಂತೂ ಭಾರಿ ಅವ್ಯವಹಾರ ನಡೆಸಲಾಗಿದೆ. ಜಿಲ್ಲಾಪಂಚಾಯತ್‌ ವತಿಯಿಂದ ನಡೆಸಿದ ಕಾಮಗಾರಿಗಳನ್ನೇ ತೋರಿಸಿ ಅಪೆಂಡಿಕ್ಸ್ –ಸಿ ಕಾಮಗಾರಿಗಳ ಹೆಸರಿನಲ್ಲಿ ಬಿಲ್ ಮಾಡಲಾಗಿದೆ ಎಂದು ಕಚೇರಿಯ ಅಧಿಕಾರಿಯೊಬ್ಬರು ಹೇಳಿದರು.

ರಸ್ತೆ ಕಾಮಗಾರಿಗಳಂತೂ ಟೆಂಡರ್, ಕಾರ್ಯಾದೇಶ, ಬಿಲ್‌ ಹಾಗೂ ಹಣಪಾವತಿಯಲ್ಲೇ ಮುಕ್ತಾಯವಾದ ಅನೇಕ ನಿದರ್ಶನಗಳಿವೆ. ಒಂದು ಮಳೆಗೆಲ್ಲ ರಸ್ತೆಗಳು ಕಿತ್ತುಹೋಗುವುದರಿಂದಾಗಿ ಕೆಲಸ ಮಾಡಿದ್ದಾರಾ ಬಿಟ್ಟಿದ್ದಾರಾ ಎಂಬುದಕ್ಕೆ ಆಧಾರವೇ ಸಿಗುವುದಿಲ್ಲ. ಹಣ ನೀರಿನಂತೆ, ಡಾಂಬರಿನಂತೆ ಪೋಲಾಗಿ ದುಡ್ಡು ಎಂಜನಿಯರ್, ಗುತ್ತಿಗೆದಾರರ ಜೇಬು ಸೇರಲು ಇದು ಸರಾಗವಾದ ಮಾರ್ಗವಾಗಿದೆ ಎಂದು ಈ ಕಚೇರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘2016–17, 2017–18ರ ಅವಧಿಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಆಗಿದ್ದ ಎಂ.ಎನ್. ರಾಜು ಅವಧಿಯಲ್ಲಿ ಅಕ್ರಮಗಳ ಸರಮಾಲೆಯೇ ನಡೆದಿದೆ. ಈ ವಿಭಾಗದ ಲೆಕ್ಕ ಪರಿಶೋಧನೆಯನ್ನು ಅಧಿಕಾರಿಗಳು ನಡೆಸುತ್ತಿದ್ದು, ಆಗಿನ ಕಾಮಗಾರಿಗಳು, ತಪ್ಪು ಲೆಕ್ಕಗಳಿಗೆ ವಿವರಣೆ, ಸ್ಪಷ್ಟನೆ ಕೊಡುವುದಕ್ಕೆ ದಿನದ ಹೆಚ್ಚಿನ ಸಮಯ ಹೋಗುತ್ತಿದೆ. ಆಡಿಟ್ ಆಕ್ಷೇಪಣೆಗಳಿಗೆ ಉತ್ತರ ನೀಡುವ ಕೆಲಸ ಬಿಟ್ಟರೆ ಬೇರೆ ಏನೂ ಮಾಡಲಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಲೋಕೋಪಯೋಗಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದರು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕುರ್ಚಿಯಲ್ಲಿ ಆಸೀನರಾದ ಎಸ್.ಎನ್. ದಯಾನಂದ ಅವರು ರಾಜು ಹಾಕಿಕೊಟ್ಟ ಪರಂಪರೆಯನ್ನೇ ಮುಂದುವರಿಸಿದ್ದಾರೆ. 2018–19ರಲ್ಲಿ ಕೂಡ ಇದೇ ರೀತಿಯ ನಿಯಮ ಉಲ್ಲಂಘನೆಯ ಪ್ರಕರಣಗಳು ನಡೆದಿವೆ ಎಂದು ಇದೇ ಅಧಿಕಾರಿ ತಿಳಿಸಿದರು.

ದಾಖಲೆ ಇಲ್ಲ: ಈ ಅವಧಿಯಲ್ಲಿ ನಡೆದ ಕಾಮಗಾರಿಗಳ ದಾಖಲೆ ಕೊಡಿ ಎಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ದಾಖಲೆಯನ್ನೇ ನೀಡುತ್ತಿಲ್ಲ. ದಾಖಲೆ ಇಲ್ಲದೇ ಇರುವುದೇ ಇದಕ್ಕೆ ಕಾರಣ. ಇರುವ ದಾಖಲೆಗಳನ್ನು ಕೊಟ್ಟರೆ ಸಿಕ್ಕಿ ಬೀಳುವ ಭಯದಿಂದ ಹೀಗೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರ್‌ಟಿಐ ಕಾರ್ಯಕರ್ತರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.