ADVERTISEMENT

‘ನ.30 ರೊಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಕಡ್ಡಾಯ ರಜೆ’

ಎಂಜಿನಿಯರುಗಳಿಗೆ ಗೋವಿಂದ ಕಾರಜೋಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:15 IST
Last Updated 4 ನವೆಂಬರ್ 2019, 19:15 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಂಗಳೂರು: ಇಲಾಖೆ ವ್ಯಾಪ್ತಿಯ ಎಲ್ಲ ರಸ್ತೆಗಳ ಗುಂಡಿ ಮುಚ್ಚುವ ಕೆಲಸವನ್ನು ನ.30 ರೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದರೆ ಎಂಜಿನಿಯರ್‌ಗಳನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದ್ದಾರೆ.

ವಿವಿಧ ಯೋಜನೆಗಳ ಪ್ರಗತಿ, ಅಪೆಂಡಿಕ್ಸ್ ಇ, ರಸ್ತೆ ಮತ್ತು ಸೇತುವೆ ಮುಂತಾದ ಕಾಮಗಾರಿಗಳ ಕುರಿತು ಸೋಮವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಯದೇ ಇದ್ದರೆ, ಎಂಜಿನಿಯರ್‌ಗಳ ಕಾರ್ಯನಿರ್ವಹಣಾವರದಿಯಲ್ಲಿ ಅಸಾಮರ್ಥ್ಯತೆಯನ್ನು ನಮೂದಿಸಲಾಗುವುದು’ ಎಂದು ಹೇಳಿದರು.

ಪ್ರವಾಹದಿಂದಾಗಿ ರಸ್ತೆಗಳು ಹಾಳಾಗಿವೆ. ಇದರಿಂದ ಸಾರ್ವಜನಿಕ ಸಂಚಾರಕ್ಕೂ ತೊಂದರೆಯಾಗಿದೆ. ಈ ರಸ್ತೆಗಳನ್ನು ತುರ್ತಾಗಿ ಸರಿಪಡಿಸಲು ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಲಾಗಿದೆ. ಯಾವುದೇ ನೆಪ ಹೇಳದೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಲ್ಲದೆ, ವಾರಕ್ಕೊಂದು ಬಾರಿ ಕಾಮಗಾರಿಗಳ ಕುರಿತು ವರದಿ ಸಲ್ಲಿಸಬೇಕು. ವರದಿ ನೀಡದಿದ್ದವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗುವುದು. ಯಾವುದೇ ಎಂಜಿನಿಯರ್‌ಗಳ ವರ್ಗಾವಣೆ ಅಥವಾ ಕಡ್ಡಾಯ ರಜೆ ಮೇಲೆ ಕಳುಹಿಸುವ ಪ್ರಸ್ತಾವನೆಯಲ್ಲಿ ಕಾರಣವನ್ನು ಸ್ಪಷ್ಟವಾಗಿ ನಮೂದಿಸುವಂತೆಯೂ ಅವರು ಸೂಚಿಸಿದರು.

ADVERTISEMENT

ಕಟ್ಟಡ ನಿರ್ಮಾಣ ಯೋಜನೆಯಡಿ ₹1500 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ₹800 ಕೋಟಿ ವೆಚ್ಚದ ನ್ಯಾಯಾಲಯ ಕಟ್ಟಡ ಕಾಮಗಾರಿಗಳೂ ಪ್ರಗತಿಯ ಹಂತದಲ್ಲಿವೆ ಎಂದರು.

ಹಣಕಾಸು ಇಲಾಖೆಯ ಸಹಮತ ಇಲ್ಲದೆ ಯಾವುದೇ ಕ್ರಿಯಾ ಯೋಜನೆಗಳಿಗೂ ಮಂಜೂರಾತಿ ಮತ್ತು ಕಾಮಗಾರಿಗಳಿಗೆ ಕಾರ್ಯಾದೇಶ ನೀಡಬಾರದು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.