ADVERTISEMENT

ಸಿಎಂ ಮನೆ ಬಳಿಯೇ ಡ್ರಗ್ಸ್ ದಂಧೆ ಆರೋಪ: ಇನ್ಸ್‌ಪೆಕ್ಟರ್‌, ಪಿಎಸ್‌ಐ ತಲೆದಂಡ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:10 IST
Last Updated 19 ಜನವರಿ 2022, 15:10 IST
   

ಬೆಂಗಳೂರು: ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ‌ ಎಸಗಿದ ಆರೋಪದಡಿ‌ ಆರ್‌.ಟಿ.ನಗರ ಠಾಣೆಯ ಇನ್‌ಸ್ಪೆಕ್ಟರ್ ಅಶ್ವತ್ಥಗೌಡ ಹಾಗೂ ಪಿಎಸ್‌ಐ ವೀರಭದ್ರ ಅವರನ್ನು ಅಮಾನತು ಮಾಡಲಾಗಿದೆ. ಈ ಸಂಬಂಧ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಬುಧವಾರ ಆದೇಶ ಹೊರಡಿಸಿದ್ದಾರೆ.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ವಿಐಪಿ ವಿಭಾಗದ ಡಿಸಿಪಿ ಮಂಜುನಾಥ್‌ ಬಾಬು ಅವರಿಗೆ ನೋಟಿಸ್‌ ನೀಡಲಾಗಿದೆ. ಅದಕ್ಕೆ ಉತ್ತರಿಸುವಂತೆಯೂ ಸೂಚಿಸಲಾಗಿದೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರ್‌.ಟಿ.ನಗರದ ಖಾಸಗಿ ಮನೆಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಪೊಲೀಸರು ಸೇರಿ, ನಾಲ್ವರನ್ನು ಡ್ರಗ್ಸ್ ಸಾಗಣೆ ಮಾಡುತ್ತಿದ್ದ ಆರೋಪದಡಿ ಪೊಲೀಸರು ಮಂಗಳವಾರ ಬಂಧಿಸಿದ್ದರು. ಕೋರಮಂಗಲ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಸಂತೋಷ್ ಹಾಗೂ ಕಾನ್‌ಸ್ಟೆಬಲ್ ಶಿವಕುಮಾರ್‌ಗೆ ಬುಧವಾರ ಜಾಮೀನು ಮಂಜೂರಾಗಿತ್ತು. ಪ್ರಕರಣದ ತನಿಖೆಯಲ್ಲಿ ಲೋಪ ಆಗಿರುವುದು ಇದರಿಂದ ದೃಢಪಟ್ಟಿತ್ತು. ಹೀಗಾಗಿಯೇ ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿಗಳು ಎಲ್ಲಿಂದ ಮಾದಕ ವಸ್ತುಗಳನ್ನು ತರುತ್ತಿದ್ದರು, ಅದನ್ನು ಹೇಗೆ ಮಾರಾಟ ಮಾಡುತ್ತಿದ್ದರು, ಯಾರೊಂದಿಗೆಲ್ಲ ನಂಟು ಹೊಂದಿದ್ದರು ಎಂಬುದರ ಬಗ್ಗೆ ಪೊಲೀಸರು ಸರಿಯಾಗಿ ಮಾಹಿತಿ ಕಲೆಹಾಕಿರಲಿಲ್ಲ. ಅಗತ್ಯ ಪುರಾವೆಗಳನ್ನೂ ಸಂಗ್ರಹಿಸಿರಲಿಲ್ಲ. ಆರೋಪಿಗಳಿಗೆ ಸುಲಭವಾಗಿ ಜಾಮೀನು ಸಿಗಲು ಅಗತ್ಯವಿರುವ ಎಲ್ಲ ಅನುಕೂಲವನ್ನೂ ಮಾಡಿಕೊಟ್ಟಿದ್ದರು’ ಎಂದು ಹೇಳಿವೆ.

‘ಸಿಬ್ಬಂದಿಯ ಪೂರ್ವಪರ ಪರಿಶೀಲಿಸದೆ ಅವರನ್ನು ಮುಖ್ಯಮಂತ್ರಿಯವರ ನಿವಾಸಕ್ಕೆ ಭದ್ರತೆಗೆ ನಿಯೋಜಿಸಿದ್ದಕ್ಕಾಗಿ ಡಿಸಿಪಿಗಳಿಗೆ ನೋಟಿಸ್‌ ನೀಡಲಾಗಿದೆ. ಅದಕ್ಕೆ ಶೀಘ್ರವೇ ಉತ್ತರಿಸುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿವೆ.

ಆಡುಗೋಡಿಯಲ್ಲಿರುವ ಪೊಲೀಸ್ ವಸತಿ ಸಮುಚ್ಚಯದಲ್ಲಿ ಸಂತೋಷ್ ಹಾಗೂ ಶಿವಕುಮಾರ್ ವಾಸವಿದ್ದರು. ಅವರನ್ನು ಮುಖ್ಯಮಂತ್ರಿಯವರ ಮನೆ ಬಂದೋಬಸ್ತ್‌ಗೆ ಆಗಾಗ ನಿಯೋಜಿಸಲಾಗುತ್ತಿತ್ತು. ಅದೇ ಮನೆ ಬಳಿಯೇ ಡ್ರಗ್ಸ್ ಸಾಗಿಸುವ ಸಂದರ್ಭದಲ್ಲಿ ಅವರಿಬ್ಬರು ಸಿಕ್ಕಿಬಿದ್ದಿದ್ದರು. ಗಾಂಜಾ ಪೆಡ್ಲರ್‌ಗಳನ್ನು ಬೆದರಿಸಿ ಹಣ ಕಿತ್ತುಕೊಳ್ಳುವ ಸಂಚು ಅವರದ್ದಾಗಿತ್ತು. ಈ ಸಂಗತಿಯನ್ನು ಪೊಲೀಸರು ಎಫ್‌ಐಆರ್‌ನಲ್ಲೂ ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.