ADVERTISEMENT

50 ಸದಸ್ಯರ ಹೆಚ್ಚಳಕ್ಕೆ ಮುಂದಾದ ರೇಸ್‌ ಕ್ಲಬ್‌

ಚುನಾವಣೆ ಇಲ್ಲದೇ ಸದಸ್ಯತ್ವ–ಭೋಗ್ಯ ನವೀಕರಿಸಿದ ಸರ್ಕಾರಕ್ಕೆ ಉಡುಗೊರೆಯೇ: ಹಿರಿಯ ಸದಸ್ಯರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 20:27 IST
Last Updated 12 ಫೆಬ್ರುವರಿ 2020, 20:27 IST
ಮೈಸೂರು ರೇಸ್‌ ಕ್ಲಬ್‌
ಮೈಸೂರು ರೇಸ್‌ ಕ್ಲಬ್‌   

ಮೈಸೂರು: 30 ವರ್ಷಗಳ ಅವಧಿಗೆ ಭೋಗ್ಯ ನವೀಕರಣವಾದ ಬೆನ್ನಲ್ಲೇ, ಚುನಾವಣೆ ನಡೆಸದೇ 50 ಮಂದಿಗೆ ಸದಸ್ಯತ್ವ ನೀಡಲು ಮುಂದಾಗಿರುವ ಮೈಸೂರು ರೇಸ್‌ ಕ್ಲಬ್‌ನ (ಎಂಆರ್‌ಸಿ) ಕ್ರಮ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಭೋಗ್ಯ ನವೀಕರಣ ಮಾಡಿದ್ದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರಕ್ಕೆ ಉಡುಗೊರೆ ನೀಡಲು ಕ್ಲಬ್‌ ಮುಂದಾಗಿದೆ ಎಂದು ಕ್ಲಬ್‌ನ ಕೆಲ ಹಿರಿಯ ಸದಸ್ಯರು ಆರೋಪಿಸಿದ್ದಾರೆ. ಈ ಭಾಗದ ಕೆಲ ಶಾಸಕರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಮೂಲಕ ಸದಸ್ಯರನ್ನು ಆಯ್ಕೆ ಮಾಡುವುದು ಶತಮಾನ ಪೂರೈಸಿರುವ ಈ ಕ್ಲಬ್‌ ನಿಯಮ. ಆದರೆ, ಫೆ. 14ರಂದು ಬೆಳಿಗ್ಗೆ 11ಕ್ಕೆ ವಿಶೇಷ ಸಾಮಾನ್ಯ ಸಭೆ ನಿಗದಿಪಡಿಸಿದ್ದು, ‘ಅಸೋಸಿಯೇಷನ್‌ ಆಫ್‌ ದಿ ಕಂಪನಿ’ ನಿಯಮಗಳಿಗೆ ತಿದ್ದುಪಡಿ ತಂದು ಚುನಾವಣೆ ನಡೆಸದೇ, ಕ್ಲಬ್‌ ಸದಸ್ಯರ ಸಂಖ್ಯೆಯನ್ನು 250ರಿಂದ 300 ಕ್ಕೆ ಹೆಚ್ಚಿಸಲು ಮುಂದಾಗಿದೆ. ಇದು ಹಲವರ ಹುಬ್ಬೇರಿಸಿದೆ.

ADVERTISEMENT

ಸದಸ್ಯರ ಸಂಖ್ಯೆ ಹೆಚ್ಚಿಸುವುದಕ್ಕೆ ಇದೊಂದು ಸಲ ಮಾತ್ರ ವ್ಯವಸ್ಥಾಪನಾ ಸಮಿತಿಗೆ ವಿಶೇಷ ಅಧಿಕಾರ ಕಲ್ಪಿಸ ಲಾಗುವುದು ಎಂದು ಸದಸ್ಯರಿಗೆ ಕಳುಹಿಸಿರುವ ನೋಟಿಸ್‌ನಲ್ಲಿ ಕ್ಲಬ್‌ ಹೇಳಿಕೊಂಡಿದೆ. ನಂತರ ಚುನಾವಣೆ ಮೂಲಕವೇ ಭರ್ತಿ ಮಾಡಿಕೊಳ್ಳಬೇಕು.

ಚೌಕಾಸಿ: 30 ಸದಸ್ಯ ಸ್ಥಾನಗಳಿಗೆ ಬಿಜೆಪಿಯ ಕೆಲ ಮುಖಂಡರು ಹಾಗೂ ಇನ್ನುಳಿದ 20 ಸ್ಥಾನಗಳಿಗೆ ಕ್ಲಬ್‌ನ ವ್ಯವಸ್ಥಾಪನಾ ಸಮಿತಿ ಸದಸ್ಯರೇ ಚೌಕಾಸಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ವಿಟೇಷನ್‌ ಕಪ್‌: ಫೆ. 29 ಹಾಗೂ ಮಾರ್ಚ್‌ 1ರಂದು ಮೊದಲ ಬಾರಿ ಪ್ರತಿಷ್ಠಿತ ‘ದಿ ಇಂಡಿಯನ್‌ ಟರ್ಫ್‌ ಇನ್ವಿಟೇಷನ್‌ ಕಪ್‌’ ಆಯೋಜನೆಗೆ ಅವಕಾಶ ಸಿಕ್ಕಿರುವ ಅಂಗವಾಗಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಇದರಲ್ಲಿ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಕ್ಲಬ್‌ನ ಚೇರ್‌ಮನ್‌ ಡಾ. ಎನ್‌.ನಿತ್ಯಾನಂದರಾವ್‌ ಈ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹೆಚ್ಚುವರಿ ಸ್ಟಿವರ್ಡ್‌: ಇದಲ್ಲದೇ, ಹೆಚ್ಚುವರಿಯಾಗಿ ಮತ್ತೊಬ್ಬ ಸ್ಟಿವರ್ಡ್‌ ಅನ್ನು ವ್ಯವಸ್ಥಾಪನಾ ಸಮಿತಿಗೆ ನಾಮನಿರ್ದೇಶನ ಮಾಡಲು ಸರ್ಕಾರಕ್ಕೆ ಅನುವು ಮಾಡಿಕೊಡಲು ಕ್ಲಬ್‌ ನಿಯಮಕ್ಕೆ ತಿದ್ದುಪಡಿ ತರುವ ಪ್ರಸ್ತಾವವಿದೆ. ಸದ್ಯ ಸರ್ಕಾರದಿಂದ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್‌ ಕಮಿಷನರ್‌ ಅವರನ್ನು ಮಾತ್ರ ಸ್ಟಿವರ್ಡ್‌ಗಳನ್ನಾಗಿ ನಾಮನಿರ್ದೇಶನ ಮಾಡಲು ಅವಕಾಶವಿದೆ. ಕರಾರು ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರಿಗೆ ಸಮಿತಿಯಲ್ಲಿ ಸ್ಥಾನ ಕಲ್ಪಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಭೋಗ್ಯ ನವೀಕರಣ: ಕುರುಬಾರಹಳ್ಳಿ ಸರ್ವೆ ನಂಬರ್‌ 4 ಹಾಗೂ ಕಸಬಾ ಸರ್ವೆ ನಂಬರ್‌ 74ರಲ್ಲಿರುವ 139.39 ಎಕರೆ ವಿಸ್ತೀರ್ಣದ ಕ್ಲಬ್‌ನ ಗುತ್ತಿಗೆ ಒಪ್ಪಂದ 2016ರ ಮಾರ್ಚ್‌ 31ಕ್ಕೆ ಕೊನೆಗೊಂಡಿತ್ತು. ನಂತರ, 3 ತಿಂಗಳ ಅವಧಿಗೆ ಭೋಗ್ಯ ವಿಸ್ತರಿಸಲಾಗಿತ್ತು. ಬಳಿಕ ಜಮೀನನ್ನು ಹಸ್ತಾಂತರಿಸುವಂತೆ ಲೋಕೋಪಯೋಗಿ ಇಲಾಖೆಯು ನೋಟಿಸ್‌ ನೀಡಿತ್ತು. ಇದಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿತ್ತು. ರಾಜ್ಯ ಸರ್ಕಾರವು 2016ರ ಜುಲೈ 1ರಿಂದ ಅನ್ವಯವಾಗುವಂತೆ 2046ರ ಜುಲೈ 31ರವರೆಗೆ ಭೋಗ್ಯ ನವೀಕರಿಸಿ ಕಳೆದ ತಿಂಗಳು 17ರಂದು ಆದೇಶ ಹೊರಡಿಸಿತ್ತು.

37 ಸದಸ್ಯರಿಂದ ಪತ್ರ

ಚುನಾವಣೆ ನಡೆಸದೇ ಸದಸ್ಯರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿ, ಕ್ಲಬ್‌ನ ಸುಮಾರು 37 ಸದಸ್ಯರು ವ್ಯವಸ್ಥಾಪನಾ ಸಮಿತಿಗೆ ಪತ್ರ ಬರೆದಿದ್ದಾರೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸದಸ್ಯತ್ವ ಪಡೆಯಲು ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಶೀಲಿಸಲು ವಿಶೇಷ ಆಯ್ಕೆ ಸಮಿತಿ ರಚಿಸಬೇಕು’ ಎಂದು ಅವರು ಕೋರಿದ್ದಾರೆ.

‘ಸದಸ್ಯರ ಆಯ್ಕೆ ಪಾರದರ್ಶಕ ವಾಗಿಯಾದರೆ ಸ್ವಾಗತಾರ್ಹ. ಆದರೆ, ಕ್ಲಬ್‌ನ ಹಾಲಿ, ಮಾಜಿ ವ್ಯವಸ್ಥಾಪನಾ ಮಂಡಳಿ ಸದಸ್ಯರ, ಸ್ಟಿವರ್ಡ್‌ಗಳ ಸಂಬಂಧಿಕರು, ಸ್ನೇಹಿತರಿಗೆ ಸದಸ್ಯತ್ವ ಕೊಡಬಾರದು. ಸದಸ್ಯತ್ವ ಸ್ಥಾನಕ್ಕೆ ಹಿಂದೆ ಸ್ಪರ್ಧಿಸಿ ಸೋತವರನ್ನು, ಕ್ರಿಮಿನಲ್‌ ಹಿನ್ನೆಲೆ ಹೊಂದಿದವರನ್ನು ಹಾಗೂ ಮೊಕದ್ದಮೆ ಎದುರಿಸುತ್ತಿರುವವರನ್ನು ಪರಿಗಣಿಸಬಾರದು. ಈ ಸಂಬಂಧ ತಿದ್ದುಪಡಿ ತರಬೇಕು’ ಎಂದು ಆಗ್ರಹಿಸಿದ್ದಾರೆ.

***

ವಿಶೇಷ ಸಾಮಾನ್ಯ ಸಭೆ ನಡೆಸಿ ಸದಸ್ಯರನ್ನು ಹೆಚ್ಚಿಸಲು ಮುಂದಾಗಿರುವುದು ನಿಜ. ಆದರೆ, ಇದು ಕ್ಲಬ್‌ನ ಆಂತರಿಕ ವಿಚಾರ

-ಎಂ.ಆರ್‌.ಜಗನ್ನಾಥ್‌,ಪ್ರಭಾರ ಕಾರ್ಯದರ್ಶಿ, ಮೈಸೂರು ರೇಸ್‌ ಕ್ಲಬ್‌

ಯಾರ ಒತ್ತಡಕ್ಕೆ ಮಣಿದು ಸದಸ್ಯರ ಹೆಚ್ಚಳಕ್ಕೆ ಮುಂದಾಗಿದೆ ಎಂಬುದು ಗೊತ್ತು. ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿ. ಆಮೇಲೆ ಈ ವಿಚಾರವಾಗಿ ಹೋರಾಡುತ್ತೇನೆ

-ಮೈಸೂರು ಭಾಗದ ಶಾಸಕ (ಸದ್ಯಕ್ಕೆ ಹೆಸರು ಬಹಿರಂಗಪಡಿಸದಿರಲು ಮನವಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.