ADVERTISEMENT

ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ: ₹2,317 ಕೋಟಿ ದುರುಪಯೋಗ ಪತ್ತೆ

ಗುರು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2022, 20:23 IST
Last Updated 24 ಮಾರ್ಚ್ 2022, 20:23 IST
 ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌   

ಬೆಂಗಳೂರು: ‘ನಗರದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಕುರಿತು ಮರು ಲೆಕ್ಕ ಪರಿಶೋಧನೆ ಕೈಗೊಳ್ಳಲಾಗಿದ್ದು, ಇದುವರೆಗೆ ₹2,317 ಕೋಟಿ ದುರ್ಬಳಕೆಯಾಗಿರುವುದು ಪತ್ತೆಯಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2014–15ರಲ್ಲಿ ₹807 ಕೋಟಿ, 2015–16ರಲ್ಲಿ ₹483 ಕೋಟಿ, 2016–17ರಲ್ಲಿ ₹333.16 ಕೋಟಿ, 2017–18ನೇ ಸಾಲಿನಲ್ಲಿ ₹380.72 ಕೋಟಿ ದುರುಪಯೋಗವಾಗಿದೆ. 2018–19ನೇ ಸಾಲಿನ ಲೆಕ್ಕಪರಿಶೋಧನೆ ಬಾಕಿ ಉಳಿದಿದೆ’ ಎಂದು ವಿವರಿಸಿದರು.

‘ಇದೇ 29ರಂದು ಬ್ಯಾಂಕ್‌ನ ಸರ್ವ ಸದಸ್ಯರ ಸಾಮಾನ್ಯ ಸಭೆ ಕರೆಯಲಾಗಿದೆ. ಸಭೆಯಲ್ಲಿ ಸದಸ್ಯರಿಗೆ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಬ್ಯಾಂಕ್‌ನಿಂದ ದುರುಪಯೋಗಪಡಿಸಿಕೊಂಡಿರುವ ₹2317 ಕೋಟಿ ಮೊತ್ತವನ್ನು ಸಂಬಂಧಪಟ್ಟ ಆರೋಪಿಗಳಿಂದ ವಸೂಲಿ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ವಂಚಕರ ಆಸ್ತಿಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಲೆಕ್ಕ ಪರಿಶೋಧನೆಯು ಸಂಪೂರ್ಣ ಮುಕ್ತಾಯವಾದ ನಂತರ ಸುಸ್ತಿದಾರರ ವಿವರ ಸೇರಿದಂತೆ ಸಮಗ್ರ ವಿಷಯಗಳು ಗೊತ್ತಾಗಲಿವೆ. ಬ್ಯಾಂಕ್‌ ಹಣ ದುರುಪಯೋಗಪಡಿಸಿಕೊಂಡಿರುವ ಆರೋಪಿಗಳಿಗೆ ಜಾಮೀನು ದೊರೆಯದಂತೆ ಕಾನೂನು ಕ್ರಮಕೈಗೊಳ್ಳುವಂತೆ ಅಡ್ವೊಕೇಟ್‌ ಜನರಲ್‌ ಅವರ ಜತೆಯೂ ಚರ್ಚಿಸಲಾಗುವುದು. ಜತೆಗೆ, 64 ಲೆಕ್ಕ ಪರಿಶೋಧಕರನ್ನು ಲೆಕ್ಕ ಪರಿಶೀಲನಾ ಸಮಿತಿಯಿಂದ ಕೈಬಿಡಲಾಗಿದೆ. ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೂ ಪತ್ರ ಬರೆಯಲಾಗಿದೆ. ಇದರಿಂದ, ಅವರು ಮುಂದಿನ ದಿನಗಳಲ್ಲಿ ಲೆಕ್ಕಪರಿಶೋಧನೆ ನಡೆಸಲು ಅನರ್ಹರಾಗುತ್ತಾರೆ’ ಎಂದರು.

‘ಹೈಕೋರ್ಟ್‌ ನಿರ್ದೇಶನದ ಅನುಸಾರ ಅಶೋಕನ್‌ ಎನ್ನುವವರನ್ನು ಆಡಳಿತಾಧಿಕಾರಿಯನ್ನಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ನೇಮಿಸಿದೆ’ ಎಂದು ತಿಳಿಸಿದರು.

ಯು.ಬಿ. ವೆಂಕಟೇಶ್‌ ಮಾತನಾಡಿ, ’ಗ್ರಾಹಕರೊಬ್ಬರು ಬ್ಯಾಂಕ್‌ನಲ್ಲಿ ₹9 ಕೋಟಿ ಠೇವಣಿ ಇರಿಸಿದ್ದರು. ಇದರಿಂದ ದೊರೆತ ಬಡ್ಡಿ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆಗಳನ್ನು ಪಾವತಿಸಿದ್ದರು. ಎರಡು ವರ್ಷದ ಬಳಿಕ ಕೇಳಿದರೆ ನಕಲಿ ಠೇವಣಿ ಎಂದು ತಿಳಿಸಿದ ಬ್ಯಾಂಕ್‌, ಬಡ್ಡಿ ವಾಪಸ್‌ ನೀಡಲು ಸೂಚಿಸಿತು. ಇಂತಹ ಹಲವಾರು ವಿಭಿನ್ನ ಪ್ರಕರಣಗಳಿದ್ದು, ಗ್ರಾಹಕರಿಗೆ ತ್ವರಿತಗತಿಯಲ್ಲಿ ನ್ಯಾಯ ದೊರಕಿಸಿಕೊಡಬೇಕು. ವಶಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್ ಅವ್ಯವಹಾರದ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಹರಿಪ್ರಸಾದ್‌, ‘ನಗರದ ಮಾಜಿ ಮೇಯರ್‌ ಒಬ್ಬರ ಪುತ್ರ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ₹5ಕೋಟಿ ಠೇವಣಿ ಇರಿಸಿದ್ದರು. ಆದರೆ, ಅಕ್ರಮಗಳಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ತ್ವರಿತಗತಿಯಲ್ಲಿ ತನಿಖೆ ಕೈಗೊಳ್ಳಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.