ADVERTISEMENT

ಬಡ್ತಿ ಮೀಸಲಾತಿ: ರೈಲ್ವೆ ಎಸ್‌.ಸಿ., ಎಸ್‌.ಟಿ. ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2019, 19:10 IST
Last Updated 7 ಮಾರ್ಚ್ 2019, 19:10 IST
ರೈಲ್ವೆ ಇಲಾಖೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ
ರೈಲ್ವೆ ಇಲಾಖೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಡ್ತಿ ಮೀಸಲಾತಿಗೆ ಸಂಬಂಧಪಟ್ಟಂತೆ ಸಂವಿಧಾನದ 117ನೇ ತಿದ್ದುಪಡಿ ಮಸೂದೆಯನ್ನು ತ್ವರಿತವಾಗಿ ಜಾರಿಗೆ ತರಬೇಕು’ ಎಂದು ರೈಲ್ವೆ ಇಲಾಖೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.

‘ಅಖಿಲ ಭಾರತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈಲ್ವೆ ನೌಕರರ ಒಕ್ಕೂಟ’ದ ನೇತೃತ್ವದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಘೋಷಣಾ ಫಲಕಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

‘ರೈಲ್ವೆ ಇಲಾಖೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎಸ್‌.ಸಿ. ಹಾಗೂ ಎಸ್‌.ಟಿ. ನೌಕರರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ಬಡ್ತಿ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಅದನ್ನು ಸರಿಪಡಿಸಲು ತ್ವರಿತವಾಗಿಸಂವಿಧಾನದ 117ನೇ ತಿದ್ದುಪಡಿ ಮಸೂದೆ ಜಾರಿಗೆ ತರಬೇಕಾದ ಅಗತ್ಯವಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ADVERTISEMENT

‘ಎಸ್‌.ಸಿ. ಹಾಗೂ ಎಸ್‌.ಟಿ. ನೌಕರರ ಹಿತದೃಷ್ಟಿಯಿಂದ ಹುದ್ದೆಗಳ ಅನುಸಾರ ರೋಸ್ಟರ್ ವ್ಯವಸ್ಥೆ ಜಾರಿಗೆ ತರಬೇಕು. ರೈಲ್ವೆ ಇಲಾಖೆಯಲ್ಲಿ ಸುರಕ್ಷತಾ ಕೆಲಸ ಮಾಡುತ್ತಿರುವ ನೌಕರರು, ಸೇವಾವಧಿ ಕೊನೆಯಲ್ಲಿ ತಮ್ಮ ಕೆಲಸವನ್ನು ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ನೀಡಲು ಶಿಫಾರಸು ಮಾಡುವ ಅವಕಾಶ ಕಲ್ಪಿಸಬೇಕು. ಎನ್‌ಪಿಎಸ್‌ ಬದಲು ಹಳೇ ಪಿಂಚಣಿ ವ್ಯವಸ್ಥೆಯನ್ನೇ ಪುನಃ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

‘ಜಾತಿ ಹೆಸರಿನಲ್ಲಿ ಎಸ್‌.ಸಿ., ಎಸ್‌.ಟಿ. ನೌಕರರ ಮೇಲೆ ಇಲಾಖೆಯ ಕೆಲ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲಾಖೆಯಲ್ಲಿರುವ ಇತರೆ ನೌಕರರ ಒಕ್ಕೂಟಗಳಿಗೆ ನೀಡುವ ಸೌಲಭ್ಯವನ್ನು ಎಸ್‌.ಸಿ., ಎಸ್‌.ಟಿ. ನೌಕರರ ಒಕ್ಕೂಟಕ್ಕೂ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಕಾರ್ಯದರ್ಶಿ ಎಂ.ಮಣಿ ಮಾತನಾಡಿ, ‘ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಅದರಂತೆ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.