ಸಾಯಿಲೇಔಟ್‌ನಲ್ಲಿ ಜಲಾವೃತಗೊಂಡ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಸಾಕು ನಾಯಿಗಳು ಸಾಗಿದರು
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಮಂಗಳವಾರ ನಸುಕಿನಿಂದ ಮಧ್ಯಾಹ್ನದವರೆಗೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಜಲಾವೃತ ಪ್ರದೇಶಗಳಲ್ಲಿ ಮತ್ತಷ್ಟು ನೀರು ಸೇರಿಕೊಂಡಿದೆ.
ಮಂಗಳವಾರ ನಸುಕಿನ 3 ಗಂಟೆಗೆ ಆರಂಭವಾದ ಮಳೆ ಮುಂಜಾನೆ 8ರವರೆಗೆ ಸುರಿಯಿತು. ಮಧ್ಯಾಹ್ನದವರೆಗೂ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನ ಮತ್ತೆ ಬಿರುಸಾಗಿ ಮಳೆ ಸುರಿಯಿತು.
ಎರಡು ದಿನದಿಂದ ಮಳೆಯಿಂದ ತತ್ತರಿಸಿದ್ದ ಜನರಿಗೆ ಮಂಗಳವಾರ ಸುರಿದ ಮಳೆ ಮತ್ತಷ್ಟು ಸಂಕಷ್ಟ ತಂದೊಡ್ಡಿತು. ಮಹದೇವಪುರದ ಸಾಯಿ ಲೇಔಟ್‌ನಲ್ಲಿ ಮಳೆ ನೀರು ತಗ್ಗಲಿಲ್ಲ. ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು.
ಮಂಗಳವಾರ ಮಧ್ಯಾಹ್ನ ಪುಲಕೇಶಿನಗರ ವ್ಯಾಪ್ತಿಯಲ್ಲಿ ಅತಿಹೆಚ್ಚು (3.2 ಸೆಂ.ಮೀ) ಮಳೆಯಾಯಿತು. ಹಂಪಿನಗರ, ಬಸವೇಶ್ವರನಗರ, ಕಾಟನ್‌ಪೇಟೆ, ಪೀಣ್ಯ, ನಾಯಂಡಹಳ್ಳಿ, ಹೇರೋಹಳ್ಳಿ, ಯಲಹಂಕ, ಬಾಣಸವಾಡಿ, ರಾಜರಾಜೇಶ್ವರಿನಗರದಲ್ಲಿ ತಲಾ 2 ಸೆಂ.ಮೀ ಮಳೆಯಾಯಿತು.
ಸಾಯಿ ಲೇಔಟ್‌ನಲ್ಲಿ ಜಲಾವೃತಗೊಂಡ ಪ್ರದೇಶದ ಜನರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ಬಿಬಿಎಂಪಿ ಸಿಬ್ಬಂದಿ ಜೆಸಿಬಿ ಮೂಲಕ ವಿತರಿಸಿದರು
ಪರಿಶೀಲನೆ: ‘ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ರಾಜಕಾಲುವೆ ಪುನರ್ ನವೀಕರಣ ಕಾಮಗಾರಿಯನ್ನು ಕೈಗೊಂಡು, ಜಲಾವೃತವಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜಕಾಲುವೆ ಹಾಗೂ ಮೆಟ್ರೊ ಕಾಮಗಾರಿಯಿಂದಾಗಿ ನೀರಿನ ಹರಿವು ಸರಿಯಾಗಿ ಹೋಗಲು ಜಾಗ ಇಲ್ಲದ ಕಾರಣ ರಸ್ತೆ ಜಲಾವೃತವಾಗುತ್ತಿರುವ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
‘ರಾಜಕಾಲುವೆಯಲ್ಲಿ ನೀರಿನ ಹರಿವಿನ ಮಟ್ಟ ಹೆಚ್ಚಾಗಿರುವುದರಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತವಾಗಿದೆ. ಜಂಕ್ಷನ್‌ನಲ್ಲಿ ರಾಜಕಾಲುವೆಯ ಪುನರ್ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಬಿಎಂಆರ್‌ಸಿಎಲ್ ಅಗತ್ಯ ಕ್ರಮಗಳನ್ನು ಕೈಗೊಂಡು ಜಲಾವೃತವಾಗುವುದನ್ನು ತಪ್ಪಿಸಬೇಕು’ ಎಂದು ಅಧಿಕಾರಿಗಳಗೆ ಸೂಚಿಸಿದರು.
‘ಕೆಎಎಸ್ ಆಫೀಸರ್ಸ್ ಲೇಔಟ್‌ನಲ್ಲಿ ಕಾಲುವೆ ನಿರ್ಮಿಸಬೇಕಿದ್ದು, ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಈ ಸಂಬಂಧ ವಿಪತ್ತು ನಿರ್ವಹಣೆ ಅಡಿ ತಾತ್ಕಾಲಿಕವಾಗಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ, ನಂತರ ಶಾಶ್ವತ ಕಾಲುವೆ ನಿರ್ಮಾಣ ಮಾಡಬೇಕು’ ಎಂದು ಅಧಿಕಾರಿಗಳಿಗೆ ಹೇಳಿದರು.
ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ವಲಯ ಅಧಿಕಾರಿಗಳೊಂದಿಗೆ ಮಂಗಳವಾರ ಮಧ್ಯಾಹ್ನ ವರ್ಚುವಲ್ ಸಭೆ ನಡೆಸಿ, ಮಳೆಯಿಂದ ಉಂಟಾಗಿರುವ ಸಂಕಷ್ಟ ಪರಿಹಾರಕ್ಕೆ ಅಗತ್ಯ ನಿರ್ದೇಶನಗಳನ್ನು ನೀಡಿದರು.
‘ನಿಯಂತ್ರಣ ಕೊಠಡಿಗಳಿಗೆ ಬಂದಂತಹ ದೂರುಗಳಿಗೆ ಕೂಡಲೆ ಸ್ಪಂದಿಸಿ, ಸಮಸ್ಯೆಗಳನ್ನು ಬಗೆಹರಿಸಬೇಕು. ಪಾಲಿಕೆಯ ಎಲ್ಲ ಎಂಟು ವಲಯಗಳಲ್ಲಿ ಅಗ್ನಿಶಾಮಕ ಠಾಣೆಗಳೊಂದಿಗೆ ವಲಯ ಆಯುಕ್ತರು ಸದಾ ಸಂಪರ್ಕದಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಾಹನಗಳನ್ನು ಬಳಸಿಕೊಳ್ಳಬೇಕು’ ಎಂದು ಸೂಚಿಸಿದರು.
ಸಾಯಿಲೇಔಟ್‌ನಲ್ಲಿ ಆರೋಗ್ಯ ಶಿಬಿರ
ಮಹದೇವಪುರ ವಲಯದ ಸಾಯಿ ಲೇಔಟ್ ಜಲಾವೃತವಾಗಿರುವುದರಿಂದ ನಿವಾಸಿಗಳಿಗಾಗಿ ಪಾಲಿಕೆಯ ಆರೋಗ್ಯ ವಿಭಾಗದಿಂದ ಮಂಗಳವಾರ ‘ಆರೋಗ್ಯ ಶಿಬಿರ’ವನ್ನು ಆಯೋಜಿಸಿ, ಔಷಧಗಳನ್ನು ಉಚಿತವಾಗಿ ವಿತರಿಸಲಾಯಿತು.
ವಲಯ ಆಯುಕ್ತ ರಮೇಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ‘ಸಾಯಿ ಲೇಔಟ್‌ನಲ್ಲಿ ನೀರಿನ ಪ್ರಮಾಣ ಶೇ 80ರಷ್ಟು ಕಡಿಮೆಯಾಗಿದ್ದು, ಮಂಗಳವಾರ ರಾತ್ರಿ ಮಳೆ ಬರದಿದ್ದರೆ ಸಂಪೂರ್ಣವಾಗಿ ನೀರು ಹೊರಹೋಗಲಿದೆ. ನೀರು ರಸ್ತೆ ಬದಿಯಿರುವ ಎಲ್ಲ ಚರಂಡಿಗಳಲ್ಲಿ ಸ್ಲ್ಯಾಬ್ ತೆಗೆದು ಜೆಸಿಬಿ ಹಾಗೂ ಸಿಬ್ಬಂದಿ ಮೂಲಕ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಪಾಲಿಕೆ ಅಧಿಕಾರಿಗಳು ಖುದ್ದು ಸ್ಥಳದಲ್ಲಿದ್ದು, ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಸ್ಥಳದಲ್ಲಿ ಒಂದು ಜೆಸಿಬಿ, 2 ಟ್ರ್ಯಾಕ್ಟರ್, 2 ಪಂಪ್ ಸೆಟ್‌ಗಳಿದ್ದು, 16 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಣ್ಣ ಅವಧಿಯಲ್ಲಿ ಅಧಿಕ ಮಳೆಯಾದ ಪರಿಣಾಮ ಸಮಸ್ಯೆಯಾಗಿದ್ದು, ಮಳೆ ಕಡಿಮೆಯಾದರೆ ನೀರಿನ ಮಟ್ಟ ಕ್ರಮೇಣ ಕಡಿಮೆಯಾಗಲಿದೆ. ಸ್ಥಳೀಯ ನಿವಾಸಿಗಳಿಗೆ ದಿನದ ತಿಂಡಿ, ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದರು.
ಬೊಮ್ಮನಹಳ್ಳಿ ವಲಯ ವ್ಯಾಪ್ತಿಯ ಎಚ್ಎಸ್ಆರ್– ಅನುಗ್ರಹ ಲೇಔಟ್‌ನಲ್ಲಿ ಜಲಾವೃತವಾಗಿದ್ದ ಪ್ರದೇಶಗಳಲ್ಲಿ ಪಂಪ್ ಸೆಟ್‌ಗಳನ್ನು ಅಳವಡಿಸಿ ನೀರು ತೆರವು ಮಾಡಲಾಗಿದೆ.
ಪಶ್ಚಿಮ ವಲಯ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಅವರು ಕೆ.ಆರ್ ಮಾರುಕಟ್ಟೆ ಹಾಗೂ ಬೇಲಿಮಠದ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ಕೆ.ಆರ್. ಮಾರುಕಟ್ಟೆ ಪಾರ್ಕಿಂಗ್ ಸ್ಥಳದಲ್ಲಿ ನೀರು ನಿಂತಿದ್ದು, ಅದನ್ನು ತೆರವುಗೊಳಿಸಬೇಕು. ರಸ್ತೆಗಳಲ್ಲಿ ಜಲಾವೃತವಾಗುವ ಪ್ರದೇಶಗಳ ಮೇಲೆ ಹೆಚ್ಚು ನಿಗಾವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಆರ್.ಆರ್. ನಗರ ವಲಯದ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿರುವ ಜನನಿ ಶಾಲೆಯ ಬಳಿ ತಡೆಗೋಡೆ ಕುಸಿದಿದೆ. ವಿದ್ಯುತ್ ಕಂಬ ಕೂಡ ಬಿದ್ದಿದೆ. ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟೀಸ್ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಜವರೇಗೌಡನದೊಡ್ಡಿ ಸುತ್ತಮುತ್ತಲಿನ ಪ್ರದೇಶಗಳು ರಸ್ತೆಗಳ ಸೈಡ್ ಡ್ರೈನ್‌ಗಳಲ್ಲಿ ಹೂಳು ತುಂಬಿದ್ದರಿಂದ ಜಲಾವೃತವಾಗಿವೆ. ರಸ್ತೆ ಭಾಗ ಕತ್ತರಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಸೈಡ್‌ಡ್ರೈನ್‌ಗಳ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ.
40 ಕೆರೆ ಬಹುತೇಕ ಪೂರ್ಣ
ನಗರದಲ್ಲಿ ಮೂರು ದಿನದಿಂದ ಬಿರುಸಾದ ಮಳೆಯಾಗುತ್ತಿರುವುದ ರಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 63 ಕೆರೆ ಪೂರ್ಣ ಭರ್ತಿಯಾಗಿದ್ದು, ಕೋಡಿಹರಿಯುತ್ತಿವೆ. 40 ಕೆರೆಗಳು ಬಹುತೇಕ ತುಂಬಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳಿದ್ದು, ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಮಹದೇವಪುರ ವಲಯದಲ್ಲಿ 13 ಕೆರೆಗಳು ತುಂಬಿ ಹರಿಯುತ್ತಿವೆ. ಯಲಹಂಕ ವಲಯದಲ್ಲಿ 19 ಕೆರೆಗಳು, ರಾಜರಾಜೇಶ್ವರಿ ನಗರ ವಲಯದಲ್ಲಿ 16 ಕೆರೆಗಳು, ಬೊಮ್ಮನಹಳ್ಳಿ ವಲಯದಲ್ಲಿ 7 ಕೆರೆಗಳು ತುಂಬಿವೆ. ಈ ಮೂರೂ ವಲಯದಲ್ಲಿ ಮೂರು ದಿನಗಳಿಂದ ಹೆಚ್ಚು ಮಳೆಯಾಗಿದೆ.
‘ಕೆರೆಗಳ ಬಳಿಯ ತೂಬುಗಳ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದು, ಕಾಲುವೆಗಳಲ್ಲಿ ತುಂಬಿರುವ ಕಸ-ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಇನ್ನಿತರೆ ತ್ಯಾಜ್ಯವನ್ನು ಸ್ವಚ್ಛಗೊಳಿಸಲಾಗುತ್ತಿದೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.
ನಗರದಲ್ಲಿ ಸೋಮವಾರ ಸುರಿದ ಮಳೆಯಿಂದಾಗಿ 25 ಮರಗಳು, 44 ಮರದ ರೆಂಬೆ/ಕೊಂಬೆಗಳು ಧರೆಗುರುಳಿರುಳಿವೆ. 10 ಮರಗಳು ಹಾಗೂ 25 ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಉಳಿದ ಮರ, ಮರದ ರೆಂಬೆ/ಕೊಂಬೆಗಳ ತೆರವು ಕಾರ್ಯಾಚರಣೆ ಯಲ್ಲಿ ಮರ ತೆರವುಗೊಳಿಸುವ ತಂಡ ಕಾರ್ಯನಿರತವಾಗಿದೆ ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು.
ಬಿಬಿಎಂಪಿಯಿಂದ ಮುಂಜಾಗ್ರತಾ ಕ್ರಮ
2024-25ನೇ ಸಾಲಿನಲ್ಲಿ ಸರ್ಕಾರ ‘ಕರ್ನಾಟಕ ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ’ ಯೋಜನೆಯಡಿ ₹2,000 ಕೋಟಿಯನ್ನು ಪಾಲಿಕೆಗೆ ಅನುದಾನವಾಗಿ ಒದಗಿಸುತ್ತಿದೆ. ಇದರಡಿ, ಬಾಕಿ ಇರುವ ಎಲ್ಲ 173.90 ಕಿ.ಮೀ. ಉದ್ದ ಮಣ್ಣಿನ ಕಾಲುವೆಗಳಿಗೆ ಆರ್.ಸಿ.ಸಿ ತಡೆಗೋಡೆ ನಿರ್ಮಾಣ
ಕೆಎಸ್‌ಎನ್‌ಡಿಎಂಸಿ ಸಂಸ್ಥೆಯ ವತಿಯಿಂದ ಹೆಚ್ಚುವರಿಯಾಗಿ ವೈಜ್ಞಾನಿಕ ಕ್ರಮ
ಬೃಹತ್ ನೀರುಗಾಲುವೆ ಒತ್ತುವರಿಗಳನ್ನು ಪರಿಣಾಮಕಾರಿಯಾಗಿ ತೆರೆವುಗೊಳಿಸಲು ಕ್ರಮ
ಬೆಂಗಳೂರು ನಗರದಲ್ಲಿರುವ ಕೆರೆಗಳಿಗೆ ತೂಬುಕಾಲುವೆಗಳನ್ನು ಅಳವಡಿಸಿ ಕೆರೆಗಳನ್ನು ಪ್ರವಾಹ ತಡೆಗಟ್ಟುವುದು
ಎಲ್ಲೆಲ್ಲಿ ಹೆಚ್ಚು ಮಳೆ? (ಸೆಂ.ಮೀನಲ್ಲಿ) – ಮಂಗಳವಾರ ನಸುಕಿನಿಂದ ಮುಂಜಾನೆವರೆಗೆ
ರಾಜರಾಜೇಶ್ವರಿನಗರ;15
ಜ್ಞಾನಭಾರತಿ;15
ಕೆಂಗೇರಿ;14.4
ಬಸವನಗುಡಿ;13.5
ವಿದ್ಯಾಪೀಠ;13.5
ಕುಮಾರಸ್ವಾಮಿ ಲೇಔಟ್;13.5
ನಾಯಂಡಹಳ್ಳಿ;13.2
ದೊರೆಸಾನಿಪಾಳ್ಯ;9.85
ಸಾರಕ್ಕಿ;9.85
ಕೋಣನಕುಂಟೆ;9.85
ಬಿಳೇಕಹಳ್ಳಿ;9.8
ಬಿಟಿಎಂ ಲೇಔಟ್;9.8
ಗಾಳಿ ಆಂಜನೇಯ ದೇವಸ್ಥಾನ;9.25
ಹಂಪಿ ನಗರ;9.25
ಎಚ್.ಗೊಲ್ಲಹಳ್ಳಿ;7.1
ಮಾರುತಿ ಮಂದಿರ;6.95
ನಾಗರಬಾವಿ;6.3
ಹೆಮ್ಮಿಗೆಪುರ;6.3
ಹೇರೋಹಳ್ಳಿ;6.3
ಉತ್ತರಹಳ್ಳಿ;6.1
ಪಟ್ಟಾಭಿರಾಮನಗರ;6.1
ಲಕ್ಕಸಂದ್ರ;6.1
ಬೊಮ್ಮನಹಳ್ಳಿ;5.45
ಕೋರಮಂಗಲ;5.45
ಅರಕೆರೆ;5.3
ಸಂಪಂಗಿರಾಮನಗರ;5.1
ಚಾಮರಾಜಪೇಟೆ;5.1
ಲಾಲ್‌ಬಾಗ್;5.1
ವಿಶ್ವೇಶ್ವರಪುರ;5.1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.