ಬೆಂಗಳೂರು: ನಗರದ ಹಲವು ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ತುಸು ಬಿರುಸಿನ ಮಳೆಯಾಗಿದೆ.
ಮಧ್ಯಾಹ್ನದವರೆಗೆ ಬಿರುಬಿಸಿಲಿನಿಂದ ಬೇಯುತ್ತಿದ್ದ ಉದ್ಯಾನ ನಗರದ ಎಂ.ಜಿ.ರಸ್ತೆ, ಬ್ರಿಗೆಡ್‌ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧದ ಸುತ್ತಮುತ್ತ ರಾತ್ರಿ 8ಕ್ಕೆ ಸಣ್ಣದಾಗಿ ಮಳೆ ಸುರಿಯಲು ಆರಂಭಿಸಿತು. ನಂತರ ತುಸು ಜೋರಾಯಿತು. ಉತ್ತರಹಳ್ಳಿ, ಸಂಪಂಗಿರಾಮ ನಗರ, ಶಾಂತಿನಗರ ಭಾಗದಲ್ಲಿ ಬಿರುಸಿನ ಮಳೆಯಾಯಿತು.
ಯಶವಂತಪುರ, ಜಾಲಹಳ್ಳಿ, ಪೀಣ್ಯ, ರಾಜಾಜಿನಗರ, ಬಸವೇಶ್ವರ ನಗರ, ಮಲ್ಲೇಶ್ವರ, ಶೇಷಾದ್ರಿಪುರ, ಶಿವಾಜಿನಗರ ಸೇರಿದಂತೆ ಹಲವೆಡೆ ರಾತ್ರಿ 10.40ರಿಂದ ಶುರುವಾದ ಬಿರುಸಿನ ಮಳೆ, ತಡರಾತ್ರಿವರೆಗೂ ಮುಂದುವರಿದಿತ್ತು. ವಿದ್ಯಾರಣ್ಯಪುರ, ಯಲಹಂಕ, ಯಶವಂತಪುರ, ಕೋರಮಂಗಲ ಮತ್ತು ಮಡಿವಾಳದಲ್ಲಿ ಮಳೆಯಾಯಿತು. ಕಂಟೋನ್ಮೆಂಟ್ ಪ್ರದೇಶ, ದೊಮ್ಮಲೂರು, ಇಂದಿರಾನಗರ, ದಾಸರಹಳ್ಳಿ, ನಾಗಸಂದ್ರ, ಎಚ್.ಎಂ.ಟಿ ಲೇಔಟ್ ಸುತ್ತಮುತ್ತ ಸಾಧಾರಣವಾಗಿ ಮಳೆಯಾಯಿತು.
ಹೊಯ್ಸಳನಗರ ವ್ಯಾಪ್ತಿಯಲ್ಲಿ ಸುಮಾರು 21 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ 12 ಮಿ.ಮೀ ಮಳೆಯಾದ ವರದಿಯಾಗಿದೆ. ಮಳೆಯಿಂದಾಗಿ ನಗರದಾದ್ಯಂತ ತಣ್ಣನೆಯ ವಾತಾವರಣ ನಿರ್ಮಾಣವಾಯಿತು.
ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಗರದ ರಾಧಾಕೃಷ್ಣ ದೇವಾಲಯ ವಾರ್ಡ್, ಕೊಡಿಗೆಹಳ್ಳಿ, ಬಸವೇಶ್ವರ ನಗರ, ಅಗ್ರಹಾರ ದಾಸರಹಳ್ಳಿ, ಅಟ್ಟೂರು ಸುತ್ತಮುತ್ತ ಕನಿಷ್ಠ 15 ಮಿ.ಮೀ ನಿಂದ ಗರಿಷ್ಠ 21.4 ಮಿಮೀ ಮಳೆಯಾದ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.