ADVERTISEMENT

ಬೆಂಗಳೂರು ನಗರದ ವಿವಿಧೆಡೆ ಅಲ್ಪಾವಧಿಯ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 15:32 IST
Last Updated 14 ಏಪ್ರಿಲ್ 2025, 15:32 IST
ಸುಮನಹಳ್ಳಿ ಮೇಲ್ಸೇತುವೆ ಕೆಳಗೆ ನೀರು ನಿಂತಿರುವುದು
ಸುಮನಹಳ್ಳಿ ಮೇಲ್ಸೇತುವೆ ಕೆಳಗೆ ನೀರು ನಿಂತಿರುವುದು   

ಬೆಂಗಳೂರು: ನಗರದ ವಿವಿಧ ಪ್ರದೇಶಗಳಲ್ಲಿ ಸೋಮವಾರ ಸಂಜೆ ಕೆಲಕಾಲ ಧಾರಾಕಾರ ಮಳೆ ಸುರಿಯಿತು. ಪರಿಣಾಮವಾಗಿ ಬಿಸಿ ತಾಪಮಾನದಿಂದ ಬಸವಳಿದಿದ್ದ ಉದ್ಯಾನ ನಗರದಲ್ಲಿ ತಂಪನೆಯ ವಾತಾವರಣ ನಿರ್ಮಾಣವಾಯಿತು.

ಮಧ್ಯಾಹ್ನ ನಗರದಾದ್ಯಂತ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ದಿಢೀರನೆ ಮಳೆ ಆರಂಭವಾಯಿತು. ವಿಧಾನಸೌಧ, ಕೆ.ಆರ್. ಸರ್ಕಲ್, ಕಾರ್ಪೊರೇಷನ್, ಶಾಂತಿನಗರ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ವೃತ್ತದ ಸುತ್ತಮುತ್ತ ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು.

ಹೆಬ್ಬಾಳ, ಯಲಹಂಕ, ಕೊಡಿಗೆಹಳ್ಳಿಯಲ್ಲಿ ಜೋರು ಮಳೆಯಾಗಿದೆ. ಕೊಡಿಗೆಹಳ್ಳಿ ಸಮೀಪದ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಬಳಿ ನೀರು ನಿಂತಿದ್ದು, ದೊಡ್ಡಬಳ್ಳಾಪುರ ರಸ್ತೆ, ಡೇರಿ ವೃತ್ತದ ಕಡೆಗೆ ನಿಧಾನಗತಿಯಲ್ಲಿ ವಾಹನಗಳು ಚಲಿಸಿದವು. ರೆಸಿಡೆನ್ಸಿ ರಸ್ತೆಯ ಒಪೆರಾ ಹೌಸ್‌ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರ ನಿಧಾನವಾಯಿತು.‌

ADVERTISEMENT

ಭಾರಿ ಮಳೆಯಿಂದಾಗಿ ಮಾಗಡಿ ರಸ್ತೆಯ ಸುಮನಹಳ್ಳಿ ಸೇತುವೆ ಕೆಳಗಡೆ ನೀರು ನಿಂತಿತ್ತು. ಸಂಪಂಗಿರಾಮ ನಗರ, ಆರ್‌.ಆರ್.ನಗರದಲ್ಲೂ ಉತ್ತಮ ಮಳೆಯಾಗಿದೆ. ಮಲ್ಲೇಶ್ವರ, ಯಶವಂತಪುರ ಭಾಗದಲ್ಲಿ ಜೋರಾಗಿ ಮಳೆಯಾಗಿದ್ದು, ಸವಾರರು ವಾಹನ ಓಡಿಸಲು ಪರದಾಡಿದರು. ವಿಜಯನಗರ, ರಾಜಾಜಿನಗರ, ಕೆ.ಆರ್‌ ಮಾರುಕಟ್ಟೆ, ಗಾಂಧಿ ಬಜಾರ್, ಮೆಜೆಸ್ಟಿಕ್ ಸುತ್ತಮುತ್ತ ಮಳೆ ಜೋರಾಗಿ ಸುರಿಯಿತು.  

ಸಂಜೆ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದವರು ಮಳೆಯಲ್ಲಿ ಸಿಲುಕಿದರು. ದಿಢೀರನೆ ಮಳೆ ಸುರಿದಿದ್ದರಿಂದ ವಾಹನ ಸವಾರರು ಅಂಡರ್‌ಪಾಸ್, ಫ್ಲೈಓವರ್ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು. 

ಗರಿಷ್ಠ 24 ಮಿ.ಮೀ ಮಳೆ:

ಕೊಡಿಗೆಹಳ್ಳಿಯಲ್ಲಿ 24 ಮಿ.ಮೀ ಮಳೆಯಾಗಿದೆ. ಆರ್‌.ಆರ್. ನಗರ ವ್ಯಾಪ್ತಿಯ ಕೊಟ್ಟಿಗೆಪಾಳ್ಯ ವಾರ್ಡ್‌ ವ್ಯಾಪ್ತಿಯ ಬಸವೇಶ್ವರನಗರದಲ್ಲಿ 16 ಮಿ.ಮೀ, ಹೇರೋಹಳ್ಳಿಯಲ್ಲಿ 12.50 ಮಿ.ಮೀ ಮಳೆಯಾಗಿದೆ. ಸಂಪಂಗಿರಾಮ ನಗರದಲ್ಲಿ 11 ಮಿ.ಮೀ ಮತ್ತು ಯಲಹಂಕದ ಚೌಡೇಶ್ವರಿ ನಗರದಲ್ಲಿ 15.50 ಮಿ.ಮೀ ಮಳೆಯಾದ ವರದಿಯಾಗಿದೆ.

ಹವಾಮಾನ ಇಲಾಖೆ ಭಾನುವಾರ ನಗರಕ್ಕೆ ‘ಯಲ್ಲೋ ಅಲರ್ಟ್‌’ ಘೋಷಿಸಿತ್ತು. ಮೂರು ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಕುರಿತು ಮುನ್ಸೂಚನೆ ನೀಡಿತ್ತು.

ಸಂದೀಪ್ ಉನ್ನಿಕೃಷ್ಣ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರಿನಲ್ಲೇ ವಾಹನಗಳು ಚಲಿಸಿದವು. 
ಕಬ್ಬನ್ ರಸ್ತೆಯಲ್ಲಿ ವಾಹನ ಸವಾರರು ಮಳೆಯ ನಡುವೆಯೇ ಸಾಗಿದರು –ಪ್ರಜಾವಾಣಿ ಚಿತ್ರ
ಕಬ್ಬನ್ ರಸ್ತೆಯಲ್ಲಿ ಮಳೆಯಲ್ಲೇ ನಡೆದು ಹೋಗುತ್ತಿರುವ ಜನರು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.