ADVERTISEMENT

ದೊಡ್ಡಬಿದರಕಲ್ಲು ವಾರ್ಡ್‌: ಮಳೆ ಬಂದರೆ ಮೊಣಕಾಲವರೆಗೆ ಮಣ್ಣು

ಕೆಸರುಗದ್ದೆಯಾಗಿ ರೂಪಾಂತರಗೊಂಡಿರುವ ರಸ್ತೆಗಳು l ಸಂಚರಿಸಲು ಇನ್ನಿಲ್ಲದ ಕಸರತ್ತು

ವರುಣ ಹೆಗಡೆ
Published 4 ಅಕ್ಟೋಬರ್ 2019, 20:04 IST
Last Updated 4 ಅಕ್ಟೋಬರ್ 2019, 20:04 IST
ವಾಲ್ಮೀಕಿ ನಗರದ ರಸ್ತೆ ಹಾಳಾಗಿದ್ದು ವಾಹನ ಸವಾರರು ಪಾದಚಾರಿ ಮಾರ್ಗದಲ್ಲಿ ಸಾಗುತ್ತಿರುವುದು –ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌
ವಾಲ್ಮೀಕಿ ನಗರದ ರಸ್ತೆ ಹಾಳಾಗಿದ್ದು ವಾಹನ ಸವಾರರು ಪಾದಚಾರಿ ಮಾರ್ಗದಲ್ಲಿ ಸಾಗುತ್ತಿರುವುದು –ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ದ್ವಿಚಕ್ರ ವಾಹನ ಸವಾರರು ಇಲ್ಲಿನ ರಸ್ತೆಗಳಲ್ಲಿ ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯ. ಸ್ವಚ್ಛ ಮಾಡಿಕೊಳ್ಳಲು ನೀರನ್ನು ಕೇಳುತ್ತಾ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಬರುತ್ತಾರೆ. ಹಾಗಾಗಿ, ಮನೆ ಹೊರಗಡೆ ಎರಡು ಕ್ಯಾನ್‌ಗಳಲ್ಲಿ ಸದಾನೀರನ್ನು ಇಟ್ಟಿರುತ್ತೇವೆ.’

–ಇದು,ದೊಡ್ಡಬಿದರಕಲ್ಲು ವಾರ್ಡ್‌ನ ಚಕ್ರನಗರದ ನಿವಾಸಿಯೊ ಬ್ಬರು ರಸ್ತೆಯ ಸ್ಥಿತಿಗತಿ ವಿವರಿಸಿದ ಪರಿ.

110 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ವಾರ್ಡ್‌ ವ್ಯಾಪ್ತಿಯಲ್ಲಿನ ವಿವಿಧ ಬಡಾವಣೆಗಳಿಗೆ ಒಳಚರಂಡಿ ಸಂಪರ್ಕ ಹಾಗೂ ನೀರು ಪೂರೈಕೆ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ನಡೆದಿದೆ.

ADVERTISEMENT

ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ರಸ್ತೆಗಳ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ವಾಹನ ಚಾಲನೆ ಮಾಡುವುದೇ ದುಸ್ತರವಾಗಿದೆ. ಮಳೆ ಸುರಿದಾಗ ಜಾರು ಬಂಡಿಯಂತಾಗುವ ರಸ್ತೆಯಲ್ಲಿ ಕಾಲಿಟ್ಟರೆ ಜಾರಿ ಬೀಳುವುದು ಖಚಿತ.

ವಿದ್ಯಮಾನ್ಯನಗರ, ಚಕ್ರನಗರ, ಚಾಲುಕ್ಯನಗರ, ರಾಘವೇಂದ್ರನಗರ, ವಡ್ಡರಪಾಳ್ಯ, ತಿಪ್ಪೇನಹಳ್ಳಿ, ದೊಡ್ಡಣ್ಣ ಬಡಾವಣೆ, ಮುಬಾರಕ್ ಬಡಾವಣೆ, ಸಿದ್ಧಾರ್ಥ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳ ಮುಖ್ಯ ಹಾಗೂ ಅಡ್ಡರಸ್ತೆಗಳಲ್ಲಿ ಮಳೆ ಬಂದರೆ ನಡೆದಾಡುವುದೇ ಕಷ್ಟವಾಗಿದೆ.

ಲಿಂಗಧೀರನಹಳ್ಳಿಯ ಮುಖ್ಯರಸ್ತೆ ಗುಂಡಿಗಳಿಂದ ಕೂಡಿದೆ. ಅಂದ್ರಹಳ್ಳಿ ಮುಖ್ಯರಸ್ತೆ ಮೂಲಕವೇ ಆಚಾರ್ಯ ಕಾಲೇಜು, ಪುಟ್ಟಣ್ಣ ಶಾಲೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ತೆರಳಬೇಕಾಗಿದೆ. ರಸ್ತೆಗಳು ಹದಗೆಟ್ಟಿರುವುದರಿಂದ ಮಕ್ಕಳು ಶಾಲೆಗಳಿಗೆ ತೆರಳುವುದೂ ಸವಾಲಾಗಿದೆ.

‘ಉತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನು ನೀರಿನ ಸಂಪರ್ಕ ಕಲ್ಪಿಸಲು ಅಗೆದಿದ್ದು ಹಾಗೆಯೇ ಬಿಡಲಾಗಿದೆ. ಈಗ ನೀರು, ರಸ್ತೆ ಎರಡು ಇಲ್ಲವಾಗಿದೆ. ಮಳೆ ಬಂದರೆ ವಾಹನವನ್ನು ಮನೆಯಿಂದ ಹೊರಗೆ ತೆಗೆಯುವಂತಿಲ್ಲ. ಒಂದು ವೇಳೆ ರಸ್ತೆಗಿಳಿಸಿದರೆ ಮನೆಯಿಂದ ನೀರು ತಂದು ವಾಹನ ಸ್ವಚ್ಛಗೊಳಿಸಬೇಕಾಗುತ್ತದೆ’ ಎಂದು ಅಂದ್ರಹಳ್ಳಿ ನಿವಾಸಿ ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಮಳೆಗೆ ಹಾಳಾಗಿರುವ ಚಕ್ರನಗರದ ರಸ್ತೆಯಲ್ಲಿ ವಾಹನ ಸವಾರರು ಸಾಹಸ ನಡೆಸುತ್ತಿರುವುದು–ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

ಪಾದಚಾರಿ ಮಾರ್ಗದಲ್ಲಿ ಸಂಚಾರ: ವಾಲ್ಮೀಕಿ ನಗರದಲ್ಲಿನ ರಸ್ತೆಗಳು ಈವರೆಗೆ ಜಲ್ಲಿ, ಡಾಂಬರು ಕಂಡಿಲ್ಲ. ಮಳೆ ಬಂದಾಗ ರಸ್ತೆ ಕೆಸರುಮಯವಾಗುತ್ತದೆ. ಸ್ಥಳೀಯರು ಪಾದಚಾರಿ ಮಾರ್ಗದಲ್ಲಿಯೇ ಸಂಚರಿಸುತ್ತಿದ್ದಾರೆ. ಇದರಿಂದ ನಿವಾಸಿಗಳು ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.

‘ರಸ್ತೆಗಳ ದುಸ್ಥಿತಿ ಸರಿಪಡಿಸಲು ಕೋರಿ ಹಲವು ಬಾರಿ ‍ಪಾಲಿಕೆಗೆ ಮನವಿ ಸಲ್ಲಿಸಿದ್ದೇವೆ. ಯಾವ ಅಧಿಕಾರಿಯೂ ಇತ್ತ ಮುಖ ಮಾಡಿಲ್ಲ. ಪಾಲಿಕೆ ಸದಸ್ಯರು ತಮ್ಮ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನಷ್ಟೇ ವೈಟ್ ಟಾಪಿಂಗ್ ಮಾಡಿಸಿಕೊಂಡಿದ್ದಾರೆ. ಆದರೆ, ಉಳಿದ ರಸ್ತೆಗಳಿಗೆ ಕನಿಷ್ಠ ಜಲ್ಲಿ ಹಾಕಿಸಲು ಕೂಡಾ ಆಸಕ್ತಿ ತೋರಿಲ್ಲ’ಎಂದು ಸ್ಥಳೀಯ ನಿವಾಸಿಗಳು ದೂರುತ್ತಾರೆ.‌

‘ಈ ಹಿಂದೆ ವೃದ್ಧರು ಹಾಗೂ ಮಹಿಳೆಯರು ವಾಕಿಂಗ್‌ ಹೋಗುತ್ತಿದ್ದರು. ರಸ್ತೆಗಳು ಹಾಳಾಗಿರುವ ಕಾರಣ ಈಗ ಮನೆಯಿಂದ ಹೊರಗಡೆ ಬರುವುದೇ ಕಷ್ಟವಾಗಿದೆ’ ಎಂದು ಚಾಲುಕ್ಯನಗರದ ನಿವಾಸಿ ಸುಧಾ ಬೇಸರ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಎಸ್.ವಾಸುದೇವ ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

* ಹದಗೆಟ್ಟ ರಸ್ತೆಗಳಿಂದ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ. ಸವಾರರು ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯ ದೃಶ್ಯವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲ

ರಮೇಶ್,ಅಂಗಡಿ ಮಾಲೀಕ

* ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಕಳೆದ ವರ್ಷ ರಸ್ತೆಗಳನ್ನು ಅಗೆದರು. ಇದುವರೆಗೂ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಪ್ರತಿನಿತ್ಯ ಹೆಣಗಾಟ ನಡೆಸಬೇಕಾಗಿದೆ

–ಕುಮಾರ್, ಚಾಲುಕ್ಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.