ADVERTISEMENT

ಶೌಚಾಲಯದಲ್ಲಿ ವ್ಯಾಪಾರಿ ಶವ, ಕೊಲೆ ಶಂಕೆ: ರಾಜಾಜಿನಗರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 6:37 IST
Last Updated 19 ಆಗಸ್ಟ್ 2019, 6:37 IST
ಜೈಕುಮಾರ್
ಜೈಕುಮಾರ್   

ಬೆಂಗಳೂರು: ಬಟ್ಟೆ ವ್ಯಾಪಾರಿ ಜೈಕುಮಾರ್ ಜೈನ್ (40) ಎಂಬುವರ ಶವ, ಅವರ ಮನೆಯ ಶೌಚಾಲಯದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ.

‘ಜೈಕುಮಾರ್ ಅವರದ್ದು ಕೊಲೆ ಎಂಬುದು ಕಂಡುಬರುತ್ತಿದೆ. ಕುಟುಂಬ ದವರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಬೇಕಿದ್ದು, ಬಳಿಕವೇ ನಿಜಾಂಶ ತಿಳಿಯಲಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದರು.

‘ರಾಜಸ್ಥಾನದ ಜೈಕುಮಾರ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಸ್ವಂತ ಅಂಗಡಿ ಇಟ್ಟುಕೊಂಡಿದ್ದರು. ಭಾಷ್ಯಂ ವೃತ್ತ ಸಮೀಪದ ಮನೆಯಲ್ಲಿ ಪತ್ನಿ, ಮಗಳು ಹಾಗೂ ಮಗನ ಜೊತೆ ವಾಸವಿದ್ದರು’ ಎಂದರು.

ADVERTISEMENT

‘ಇತ್ತೀಚೆಗೆ ಪತ್ನಿ ಹಾಗೂ ಮಗ, ಕೆಲಸದ ನಿಮಿತ್ತ ಪಾಂಡಿಚೇರಿಗೆ ಹೋಗಿದ್ದಾರೆ. ಜೈಕುಮಾರ್ ಹಾಗೂ ಮಗಳು ಮಾತ್ರ ಮನೆಯಲ್ಲಿದ್ದರು’ ಎಂದು ಹೇಳಿದರು.

ಕೊಠಡಿಯಲ್ಲಿ ರಕ್ತದ ಕಲೆಗಳು: ‘ಮೇಲ್ನೋಟಕ್ಕೆ ಶೌಚಾಲಯದಲ್ಲಿ ಬೆಂಕಿ ಹಚ್ಚಿಕೊಂಡು ಜೈಕುಮಾರ್ ಮೃತಪಟ್ಟಂತೆಕಾಣುತ್ತಿದೆ. ಆದರೆ, ಶೌಚಾಲಯಕ್ಕೆ ಹೊಂದಿಕೊಂಡಿರುವ ಕೊಠಡಿಯಲ್ಲಿ ರಕ್ತದ ಕಲೆಗಳಿವೆ. ಅದೇ ಕೊಠಡಿಯಲ್ಲೇ ಜೈಕುಮಾರ್ ಮಲಗುತ್ತಿದ್ದರು ಎಂಬುದು ಗೊತ್ತಾಗಿದೆ’ ಎಂದು ರಾಜಾಜಿನಗರ ಪೊಲೀಸರು ಹೇಳಿದರು.

‘ಕೃತ್ಯ ನಡೆದ ಸ್ಥಳವನ್ನು ನೋಡಿದರೆ ಕೊಲೆ ನಡೆದಿರುವ ಅನುಮಾನ ದಟ್ಟವಾಗುತ್ತಿದೆ. ಆದರೆ, ಕೊಲೆಗಾರರು ಯಾರು ಎಂಬುದನ್ನು ಪತ್ತೆ ಮಾಡಬೇಕಿದೆ’ ಎಂದು ತಿಳಿಸಿದರು.

ಸ್ನೇಹಿತರ ಜೊತೆ ಪಾರ್ಟಿ: ‘ಶನಿವಾರ ರಾತ್ರಿ ಜೈಕುಮಾರ್, ಸ್ನೇಹಿತರೊಬ್ಬರನ್ನು ಮನೆಗೆ ಕರೆತಂದು ಪಾರ್ಟಿ ಮಾಡಿದ್ದಾರೆ. ಅದೇ ವೇಳೆಯೇ ಮಗಳ ಮೇಲೂ ಹಲ್ಲೆ ಮಾಡಿರುವ ಮಾಹಿತಿ ಇದ್ದು, ಅದನ್ನು ಪರಿಶೀಲಿಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಸ್ನೇಹಿತ ರಾತ್ರಿಯೇ ಮನೆಯಿಂದ ಹೊರಟು ಹೋಗಿದ್ದಾನೆ. ಆ ನಂತರ ಮಗಳು ಮಾತ್ರ ಮನೆಯಲ್ಲಿದ್ದಳು. ಮರುದಿನ ಬೆಳಿಗ್ಗೆ ಶೌಚಾಲಯದಲ್ಲೇ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲೇ ಸಂಪೂರ್ಣವಾಗಿ ಸುಟ್ಟು ಜೈಕುಮಾರ್ ಮೃತಪಟ್ಟಿದ್ದಾರೆ. ಕೊಲೆ ಸಂಗತಿ ಮುಚ್ಚಿಡುವುದಕ್ಕಾಗಿ ಯಾರೋ ಈ ರೀತಿ ಮೃತದೇಹವನ್ನು ಸುಟ್ಟಿರುವ ಸಾಧ್ಯತೆಯೂ ಇದೆ’ ಎಂದರು.

‘ಸ್ಥಳಕ್ಕೆ ಹೋಗಿದ್ದ ಸಿಬ್ಬಂದಿ, ಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪತ್ನಿ ಹಾಗೂ ಮಗ, ಪಾಂಡಿಚೇರಿಯಿಂದ ನಗರಕ್ಕೆ ವಾಪಸ್ ಬರುತ್ತಿದ್ದಾರೆ. ಅವರು ಬಂದ ಬಳಿಕವೇ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ವಿವರಿಸಿದರು.

ಮಗಳ ಮೇಲೆ ಅನುಮಾನ

‘ಜೈಕುಮಾರ್ ಸಾವಿನ ಸಂಬಂಧ, ಮಗಳ ಮೇಲೆ ಅನುಮಾನ ಇದೆ. ಆಕೆ ಅಪ್ತಾಪ್ತೆಯಾಗಿದ್ದು, ಸದ್ಯಕ್ಕೆ ವಿಚಾರಣೆ ನಡೆಸಿಲ್ಲ. ಆಕೆಯ ತಾಯಿ ನಗರಕ್ಕೆ ಬಂದ ಬಳಿಕವೇ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು. ‘ಮನೆಯಲ್ಲಿ ತಂದೆ– ಮಗಳು ಮಾತ್ರ ಇದ್ದರು. ಮಗಳ ಸ್ನೇಹಿತರು ಯಾರಾದರೂ ಮನೆಗೆ ಬಂದಿದ್ದರಾ? ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.