ADVERTISEMENT

ಬಾಲಕ ರಾಜಕಾಲುವೆಗೆ ಬಿದ್ದಿರುವ ಶಂಕೆ

ಗೋರಿಪಾಳ್ಯದಲ್ಲಿ ಘಟನೆ l ಬಿಬಿಎಂಪಿ, ಅಗ್ನಿಶಾಮಕ ದಳ, ಪೊಲೀಸರಿಂದ ಶೋಧ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 20:20 IST
Last Updated 3 ಸೆಪ್ಟೆಂಬರ್ 2019, 20:20 IST
ಝೈನ್
ಝೈನ್   

ಬೆಂಗಳೂರು: ಗೋರಿಪಾಳ್ಯ ಸಮೀಪದ ಅರಾಫತ್ ನಗರದ ಐದು ವರ್ಷದ ಬಾಲಕ ಝೈನ್ ಷರೀಫ್ ಎಂಬಾತ ರಾಜಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗುತ್ತಿದೆ.

ಬಿಬಿಎಂಪಿ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬಾಲಕನಿಗಾಗಿ ರಾಜಕಾಲುವೆಯಲ್ಲಿ ಶೋಧ ಆರಂಭಿಸಿದ್ದಾರೆ.

‘ಇಮ್ರಾನ್ ಶರೀಫ್ ಹಾಗೂ ಗುಲ್ಶನ್ ದಂಪತಿಯ ಮಗ ಝೈನ್, ಆಗಸ್ಟ್ 30ರಂದು ಬೆಳಿಗ್ಗೆ ಸ್ಥಳೀಯ ಬಾಲಕಿಯೊಬ್ಬಳ ಜೊತೆ ಕಸ ಎಸೆಯಲು ಕಾಲುವೆ ಬಳಿ ಹೋಗಿದ್ದ. ಅದೇ ವೇಳೆ ಆಯತಪ್ಪಿ ಕಾಲುವೆಯೊಳಗೆ ಬಿದ್ದಿರಬೇಕು’ ಎಂದು ಜೆ.ಜೆ. ನಗರ ಪೊಲೀಸರು ಹೇಳಿದರು.

ADVERTISEMENT

‘ಗೋರಿಪಾಳ್ಯದಿಂದ ಕೆಂಗೇರಿ ಕಡೆಗೆ ರಾಜಕಾಲುವೆ ಹರಿದುಹೋಗಿದೆ. ಸೋಮವಾರ ಬೆಳಿಗ್ಗೆಯಿಂದ ಶೋಧ ಕಾರ್ಯ ಆರಂಭವಾಗಿದೆ. ಮಂಗಳವಾರ ಸಂಜೆಯವರೆಗೆ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಕಾಲುವೆಯಲ್ಲಿ ಶೋಧ ನಡೆಸಲಾಯಿತು. ಯಾವುದೇ ಸುಳಿವು ಸಿಕ್ಕಿಲ್ಲ.ಪೊಲೀಸರು, ಅಗ್ನಿಶಾಮಕ ದಳ ಹಾಗೂ ಬಿಬಿಎಂಪಿಯ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ತಡವಾಗಿ ಪತ್ತೆ: ‘ತಂದೆ ಇಮ್ರಾನ್ ಸಾಬ್, ಐದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದಾರೆ. ತಾಯಿ ಗುಲ್ಶನ್ ಅವರು ಮನೆ ಕೆಲಸ ಮಾಡಿ ಝೈನ್ ಸೇರಿ ಮೂವರು ಮಕ್ಕಳನ್ನು ಸಾಕುತ್ತಿದ್ದಾರೆ’ ಎಂದು ಸಂಬಂಧಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಗಸ್ಟ್ 30ರಂದು ಬೆಳಿಗ್ಗೆ ತಾಯಿ ಮನೆ ಕೆಲಸಕ್ಕೆ ಹೋಗಿದ್ದರು. ಅದೇ ವೇಳೆ ಬಾಲಕ, ಪರಿಚಯಸ್ಥ ಬಾಲಕಿ ಜೊತೆಗೆ ಕಾಲುವೆ ಬಳಿಗೆ ಹೋಗಿದ್ದ. ಆ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆರಂಭದಲ್ಲಿ ಬಾಲಕಿಯೂ ಹೇಳಿರಲಿಲ್ಲ. ಮಧ್ಯಾಹ್ನ ಮನೆಗೆ ಬಂದಿದ್ದ ತಾಯಿ, ತಡರಾತ್ರಿವರೆಗೂ ಮಗನಿಗಾಗಿ ಹುಡುಕಾಟ ನಡೆಸಿದ್ದರು. ಯಾವುದೇ ಸುಳಿವು ಸಿಕ್ಕಿರಲಿಲ್ಲ.’

‘ಆಗಸ್ಟ್ 31ರಂದು ಠಾಣೆಗೆ ಹೋಗಿ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮರುದಿನ ಬಾಲಕನ ಮನೆ ಸುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಝೈನ್, ಬಾಲಕಿಯ ಜೊತೆ ಕಾಲುವೆ ಬಳಿ ಹೋಗಿದ್ದು ದೃಶ್ಯದಲ್ಲಿ ಸೆರೆಯಾಗಿತ್ತು. ಬಾಲಕಿಯನ್ನು ವಿಚಾರಿಸಿದಾಗಲೇ ಝೈನ್ ಕಾಲುವೆಗೆ ಬಿದ್ದಿರುವ ಸಂಗತಿ ಗೊತ್ತಾಗಿದೆ. ಆ ನಂತರವೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು’ ಎಂದು ಸಂಬಂಧಿ ಹೇಳಿದರು.

ಬೋಟ್ ಬಳಕೆ: ‘ಬಾಲಕ ಬಿದ್ದಿದ್ದಾನೆ ಎನ್ನಲಾದ ಜಾಗದಲ್ಲಿ ಹುಡುಕಾಟ ನಡೆಸಲಾಗಿದೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ರಾಜಕಾಲುವೆಯುದ್ದಕ್ಕೂ ಬೋಟ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಕೆಂಗೇರಿ ಗೇಟ್ ಎಸಿಪಿ ಮಂಜುನಾಥ್ ಹೇಳಿದರು.

‘ಬಾಲಕ ಹಾಗೂ ಬಾಲಕಿ ಇಬ್ಬರೂ ರಾಜಕಾಲುವೆಯತ್ತ ಹೋಗಿದ್ದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಾಲಕಿ ಮಾತ್ರ ವಾಪಸು ಬಂದಿದ್ದು, ಬಾಲಕ ಬಂದಿಲ್ಲ. ಅದೇ ಅನುಮಾನದಲ್ಲಿ ಹುಡುಕಾಟ ನಡೆಯುತ್ತಿದೆ. ಬಾಲಕ ಬಿದ್ದಿರುವ ಬಗ್ಗೆ ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ’ ಎಂದೂ ಅವರು ತಿಳಿಸಿದರು.

12 ಕಿ.ಮೀ.ವರೆಗೆ ಕಾರ್ಯಾಚರಣೆ

ಬಾಲಕ ಬಿದ್ದಿದ್ದಾನೆ ಎನ್ನಲಾದ ಸ್ಥಳದಿಂದ ಕಾಲುವೆ ಹರಿದು ಹೋಗಿರುವ 12 ಕಿ.ಮೀ.ವರೆಗೂ ರಕ್ಷಣಾ ಪಡೆಗಳು ಮಂಗಳವಾರ ಕಾರ್ಯಾಚರಣೆ ನಡೆಸಿದವು.

‘ನಗರದಲ್ಲಿ ಮಧ್ಯಾಹ್ನ ಮಳೆ ಸುರಿದಿದ್ದರಿಂದ, ಕಾಲುವೆಯಲ್ಲಿ ನೀರಿನ ಹರಿಯುವಿಕೆ ಹೆಚ್ಚಾಯಿತು. ಇದರ ಮಧ್ಯೆಯೇ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು’ ಎಂದು ವಲಯ ಅಗ್ನಿಶಾಮಕ ಅಧಿಕಾರಿ ಶೇಖರ್ ತಿಳಿಸಿದರು.

‘ಸೋಮವಾರ ಎಂಟು ತಾಸು ಕಾರ್ಯಾಚರಣೆ ಮಾಡಲಾಯಿತು. ಮಂಗಳವಾರ ಬೆಳಿಗ್ಗೆ 6ರಿಂದಲೇ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದುಹೇಳಿದರು.

ತಾಯಿ ಗುಲ್ಶನ್‌ಗೆ ಆಘಾತ

ಪತಿ ಇಮ್ರಾನ್ ಷರೀಫ್ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದ ಗುಲ್ಶನ್ ಅವರಿಗೆ ಮಗ ಝೈನ್ ನಾಪತ್ತೆಯಾಗಿರುವುದು ಆಘಾತವನ್ನುಂಟು ಮಾಡಿದೆ. ರಕ್ಷಣಾ ಕಾರ್ಯಾಚರಣೆ ಸ್ಥಳದಲ್ಲಿದ್ದ ಗುಲ್ಶನ್, ‘ನನ್ನ ಮಗನನ್ನು ಬದುಕಿಸಿ ಕೊಡಿ’ ಎಂದು ಗೋಗರೆಯುತ್ತಿದ್ದರು.

‘ಝೈನ್ ನಾಪತ್ತೆಯಾದಾಗಿನಿಂದ ತಾಯಿ ಏನನ್ನೂ ತಿನ್ನುತ್ತಿಲ್ಲ. ಅವರ ಆರೋಗ್ಯವೂ ಹದಗೆಡುತ್ತಿದೆ’ ಎಂದು ಸಂಬಂಧಿಕರು ಹೇಳಿದರು.

ತಡೆಗೋಡೆ ನಿರ್ಮಿಸದ ಬಿಬಿಎಂಪಿ; ಆಕ್ರೋಶ

‘ರಾಜಕಾಲುವೆ ದುರಸ್ತಿ ಮಾಡಿ ಸುತ್ತಲೂ ತಡೆಗೋಡೆ ನಿರ್ಮಿಸಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಬಾಲಕ ಕಾಲುವೆಗೆ ಬಿದ್ದಿದ್ದಾನೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಕಾಲುವೆ ಹಾಳಾಗಿ ಬಹಳ ವರ್ಷವಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.