ADVERTISEMENT

ಗುಣಮಟ್ಟದ ಶಿಕ್ಷಣ ವಿಶ್ವವಿದ್ಯಾಲಯಗಳ ಜವಾಬ್ದಾರಿ: ಶರಣ ಪ್ರಕಾಶ ಪಾಟೀಲ

ರಾಜೀವ್ ಗಾಂಧಿ ಆರೋಗ್ಯ ವಿ.ವಿ ಕಾರ್ಯಕ್ರಮದಲ್ಲಿ ಶರಣ ಪ್ರಕಾಶ ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:32 IST
Last Updated 26 ಜೂನ್ 2025, 15:32 IST
ಶರಣ ಪ್ರಕಾಶ ಪಾಟೀಲ
ಶರಣ ಪ್ರಕಾಶ ಪಾಟೀಲ   

ಬೆಂಗಳೂರು: ‘ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಬೇಕು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 30ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಒಂದು ನಾಡು ಅಭಿವೃದ್ಧಿಯಾಗಬೇಕಾದರೆ ಶಿಕ್ಷಣದ ಅಡಿಪಾಯ ಗಟ್ಟಿಯಾಗಿರಬೇಕು. 60-70ರ ದಶಕದಲ್ಲಿ ನಮ್ಮ ಪೂರ್ವಜರು ಹಾಕಿರುವ ಬುನಾದಿಯಿಂದ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕವು ಪ್ರಗತಿ ಹೊಂದಲು ಸಾಧ್ಯವಾಗಿದೆ. ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೂ ಅವರು ಒತ್ತು ಕೊಟ್ಟಿದ್ದರು. ಹೀಗಾಗಿ, ಇಲ್ಲಿ 200 ಎಂಜಿನಿಯರಿಂಗ್, 70 ವೈದ್ಯಕೀಯ ಹಾಗೂ 600ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳು ಸ್ಥಾಪನೆಯಾಗಿವೆ. ದೇಶದಲ್ಲಿ ಅತಿ ಹೆಚ್ಚು ವೈದ್ಯಕೀಯ ಹಾಗೂ ನರ್ಸಿಂಗ್ ಸೀಟು ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ’ ಎಂದು ಹೇಳಿದರು.

ADVERTISEMENT

‘ಡಿಜಿಟಲ್ ಆರೋಗ್ಯ, ಟೆಲಿ ಮೆಡಿಸಿನ್ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ರೋಗನಿರ್ಣಯ ವ್ಯವಸ್ಥೆಯನ್ನು ವೈದ್ಯಕೀಯ ಸಂಸ್ಥೆಗಳು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು’ ಎಂದರು.

ಗೌರಿಗದ್ದೆ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ, ‘ವೈದ್ಯರಲ್ಲಿ ದೇವರನ್ನು ಕಾಣಲಾಗುತ್ತಿದ್ದು, ಅವರು ವೃತ್ತಿ ಗೌರವವನ್ನು ಉಳಿಸಿಕೊಳ್ಳಬೇಕು. ರೋಗಿಗಳ ವಿಶ್ವಾಸ ಉಳಿಸಿಕೊಂಡು, ಅವರಿಗೆ ಆತ್ಮವಿಶ್ವಾಸ ತುಂಬಬೇಕು’ ಎಂದು ಹೇಳಿದರು. 

ಪೌಷ್ಟಿಕಾಂಶ ತಜ್ಞೆ ಡಾ.ಗೌರಿ ರೊಕ್ಕಮ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್, ಕುಲಸಚಿವರಾದ ಪಿ.ಆರ್.ಶಿವಪ್ರಸಾದ್, ಡಾ.ಎಸ್.ರಿಯಾಜ್ ಬಾಷಾ, ಹಣಕಾಸು ಅಧಿಕಾರಿ ಬಿ.ಕೆ.ಗಂಗಾಧರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.