ADVERTISEMENT

ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ದೊಡ್ಡ ಮಾದರಿ: ರಮೇಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 15:16 IST
Last Updated 29 ಆಗಸ್ಟ್ 2021, 15:16 IST
ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆಯವರ 95ನೇ ಜನ್ಮದಿನಾಚರಣೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್‌ ಅವರು ಸಾಹಿತಿ ಗೊ.ರು. ಚನ್ನಬಸಪ್ಪ ಅವರಿಗೆ ‘ರಾಮಕೃಷ್ಣ ಹೆಗಡೆ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕ ಟಿ.ಎನ್.ಸೀತಾರಾಂ, ಜೆಡಿಯು ಮುಖಂಡ ಡಾ.ಎಂ.ಪಿ. ನಾಡಗೌಡ, ಭಾರತ ಯಾತ್ರಾ ಕೇಂದ್ರದ ಕೆ.ವಿ. ನಾಗರಾಜಮೂರ್ತಿ, ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಟಿ. ಪ್ರಭಾಕರ್, ಹೆಗಡೆಯವರ ಮಗಳು ಮಮತಾ ನಿಚ್ಚಾನಿ, ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್ ಹಾಗೂ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಇದ್ದರು.– ಪ್ರಜಾವಾಣಿ ಚಿತ್ರ
ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆಯವರ 95ನೇ ಜನ್ಮದಿನಾಚರಣೆಯಲ್ಲಿ ಶಾಸಕ ಕೆ.ಆರ್.ರಮೇಶ್ ಕುಮಾರ್‌ ಅವರು ಸಾಹಿತಿ ಗೊ.ರು. ಚನ್ನಬಸಪ್ಪ ಅವರಿಗೆ ‘ರಾಮಕೃಷ್ಣ ಹೆಗಡೆ ಪ್ರಶಸ್ತಿ’ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ನಿರ್ದೇಶಕ ಟಿ.ಎನ್.ಸೀತಾರಾಂ, ಜೆಡಿಯು ಮುಖಂಡ ಡಾ.ಎಂ.ಪಿ. ನಾಡಗೌಡ, ಭಾರತ ಯಾತ್ರಾ ಕೇಂದ್ರದ ಕೆ.ವಿ. ನಾಗರಾಜಮೂರ್ತಿ, ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಟಿ. ಪ್ರಭಾಕರ್, ಹೆಗಡೆಯವರ ಮಗಳು ಮಮತಾ ನಿಚ್ಚಾನಿ, ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್ ಹಾಗೂ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಇದ್ದರು.– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ದೊಡ್ಡ ಮಾದರಿ. ನಂಬಿದ್ದ ಮೌಲ್ಯಗಳಿಗೆ ಎಂದೂ ಚ್ಯುತಿಯಾಗದಂತೆ ನಡೆದುಕೊಂಡಿದ್ದರು. ಅದಕ್ಕಾಗಿಯೇ ಕುಟುಂಬ ರಾಜಕಾರಣದಿಂದ ದೂರ ಉಳಿದಿದ್ದರು ಎಂದು ಶಾಸಕ ಕೆ.ಆರ್‌. ರಮೇಶ್ ಕುಮಾರ್ ಹೇಳಿದರು.

ರಾಷ್ಟ್ರೀಯ ನವನಿರ್ಮಾಣ ವೇದಿಕೆ ಮತ್ತು ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆಯವರ 95ನೇ ಜನ್ಮದಿನಾಚರಣೆಯಲ್ಲಿ ಸಾಹಿತಿ ಗೊ.ರು. ಚನ್ನಬಸಪ್ಪ ಅವರಿಗೆ ‘ರಾಮಕೃಷ್ಣ ಹೆಗಡೆ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.

ಕುಟುಂಬ ರಾಜಕಾರಣದ ವ್ಯಾಮೋಹಕ್ಕೆ ಸಿಲುಕಬಾರದು ಎಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ಮತ್ತು ಅವರ ಪತ್ನಿ ಮಕ್ಕಳಾಗದಂತೆ ಸ್ವಯಂ ನಿರ್ಬಂಧಿಸಿಕೊಂಡಿದ್ದರು. ಆಂಧ್ರಪ್ರದೇಶದ ಕಮ್ಯುನಿಸ್ಟ್‌ ನಾಯಕ ಉಚ್ಚಾಲಪಲ್ಲಿ ಸುಂದರಯ್ಯ ದಂಪತಿ ಕೂಡ ಅದೇ ಮಾರ್ಗ ಅನುಸರಿಸಿದ್ದರು. ಆದರೆ, ರಾಮಕೃಷ್ಣ ಹೆಗಡೆ ಅವರು ಮಕ್ಕಳಿದ್ದರೂ, ಅವರನ್ನು ರಾಜಕಾರಣಕ್ಕೆ ತರದೇ ಕುಟುಂಬ ರಾಜಕೀಯವನ್ನು ಮೀರಿ ಮುನ್ನಡೆದರು ಎಂದು ಸ್ಮರಿಸಿದರು.

ADVERTISEMENT

ನಿಗರ್ವಿ, ಜನಪರ ಮತ್ತು ಅಹಂಕಾರವಿಲ್ಲದ ನಡವಳಿಕೆಯಿಂದಲೇ ಹೆಗಡೆ ಜನಾನುರಾಗಿ ನಾಯಕರಾಗಿ ಬೆಳೆದಿದ್ದರು. ಡಿ. ದೇವರಾಜ ಅರಸು ಮತ್ತು ಹೆಗಡೆ ಅವರ ಆಡಳಿತದ ಕಾಲದಲ್ಲಿ ಕಡತಗಳ ವಿಲೇವಾರಿಗೆ ದರ ನಿಗದಿಸುವ ಪರಿಪಾಠ ಇರಲಿಲ್ಲ. ಅವರಿಬ್ಬರೂ ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗ ಪ್ರಜಾಪ್ರಭುತ್ವ ವ್ಯವಸ್ಥೆಯ ದಿಕ್ಸೂಚಿಯಂತೆ ಕೆಲಸ ಮಾಡಿದ್ದರು ಎಂದರು.

ಕ್ರೂರಿಗಳಂತೆ ವರ್ತಿಸಬಾರದು: ‘ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ 31 ಮಂದಿ ಮೃತಪಟ್ಟ ಘಟನೆಯನ್ನು ಎಲ್ಲರೂ ಮೂರು ದಿನಗಳಲ್ಲೇ ಮರೆತುಬಿಟ್ಟೆವು. ಸಾಕಿದ್ದ ನಾಯಿ ಸತ್ತರೆ ಮೂರು ದಿನ ಅಳುತ್ತೇವೆ. 31 ಜನರ ಸಾವಿಗೆ ಬೆಲೆ ಇಲ್ಲದಂತೆ ವರ್ತಿಸಲಾಯಿತು. ಆಳುವವರು ಕ್ರೂರಿಗಳಾಗಬಾರದು’ ಎಂದು ರಮೇಶ್‌ ಕುಮಾರ್‌ ಹೇಳಿದರು.

‘ಹಳೆಯ ತಪ್ಪು ಮಾಡಿದ ಬಿಎಸ್‌ವೈ’

‘ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಳೆಯ ತಪ್ಪುಗಳ ಬಗ್ಗೆ ಎಚ್ಚರಿಸಿದ್ದೆ. ಅವರು ಆ ದಿನ ಸಹಮತ ವ್ಯಕ್ತಪಡಿಸಿದ್ದರು. ಮತ್ತೆ ಮುಖ್ಯಮಂತ್ರಿಯಾದ ಬಳಿಕ ಮರೆತರು. ಹೀಗಾಗಿ ಪುನಃ ಅದೇ ತಪ್ಪು ಮಾಡಿ, ಈ ಸ್ಥಿತಿಗೆ ಬಂದಿದ್ದಾರೆ’ ಎಂದು ರಮೇಶ್‌ ಕುಮಾರ್‌ ಹೇಳಿದರು.

ಒಗ್ಗಟ್ಟಿನ ಕೊರತೆ: ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌.ಶಂಕರ್‌ ಮಾತನಾಡಿ, ‘ಒಗ್ಗಟ್ಟಿನ ಕೊರತೆಯಿಂದ ಜನತಾ ಪರಿವಾರಕ್ಕೆ ಹಿನ್ನಡೆಯಾಯಿತು. ಜನತಾ ಪರಿವಾರದ ನಾಯಕರು ಒಗ್ಗಟ್ಟಿನಿಂದ ಇದ್ದಿದ್ದರೆ ಎಚ್‌.ಡಿ. ದೇವೇಗೌಡರು ಪೂರ್ಣಾವಧಿಗೆ ಪ್ರಧಾನಿ ಹುದ್ದೆಯಲ್ಲಿರುತ್ತಿದ್ದರು. ರಾಮಕೃಷ್ಣ ಹೆಗಡೆ ಅವರೂ ಪ್ರಧಾನಿಯಾಗುತ್ತಿದ್ದರು’ ಎಂದರು.

ಹೆಗಡೆ ಅವರ ಮಗಳು ಮಮತಾ ನಿಚ್ಚಾನಿ ತಂದೆಯ ಜತೆಗಿನ ಒಡನಾಟ ಸ್ಮರಿಸಿದರು. ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್, ಜೆಡಿಯು ಮುಖಂಡ ಡಾ.ಎಂ.ಪಿ.ನಾಡಗೌಡ, ಮಾಜಿ ಶಾಸಕ ಪಿ.ಎಸ್‌.ಪ್ರಕಾಶ್, ಕಿರುತೆರೆ ನಿರ್ದೇಶಕ ಟಿ.ಎನ್‌. ಸೀತಾರಾಂ, ಚಿತ್ರಕಲಾ ಪರಿಷತ್‌ ಉಪಾಧ್ಯಕ್ಷ ಟಿ. ಪ್ರಭಾಕರ್‌ ಉಪಸ್ಥಿತರಿದ್ದರು.

ಗ್ರಾಮಗಳಿಗೆ ಶಕ್ತಿ ತುಂಬಬೇಕು

ಪ್ರಶಸ್ತಿ ಪುರಸ್ಕೃತ ಗೊ.ರು.ಚನ್ನಬಸಪ್ಪ ಅವರು, ‘ಸ್ವಾವಲಂಬಿ ಮತ್ತು ಆತ್ಮಗೌರವ ಇರುವ ಭಾರತ ನಿರ್ಮಿಸಲು, ಗ್ರಾಮ ಭಾರತವನ್ನು ಸಶಕ್ತಗೊಳಿಸಲು ಎಲ್ಲರೂ ಕೈಜೋಡಿಸಬೇಕಿದೆ’ ಎಂದರು.

ಸ್ವಗ್ರಾಮ ಗೊಂಡೇದಹಳ್ಳಿಯನ್ನು ಸಶಕ್ತವಾಗಿ ರೂಪಿಸಿದ ಮಾದರಿಯನ್ನು ದೇಶದ ಇತರ ಗ್ರಾಮಗಳಿಗೂ ತಲುಪಿಸಲು ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.