ADVERTISEMENT

ಸಾಹಿತಿ ಜಯಾ ರಾಜಶೇಖರಗೆ ‘ರಮಣಶ್ರೀ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 14:33 IST
Last Updated 28 ಅಕ್ಟೋಬರ್ 2025, 14:33 IST
ಜಯಾ ರಾಜಶೇಖರ
ಜಯಾ ರಾಜಶೇಖರ   

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ನೀಡುವ 2025ನೇ ಸಾಲಿನ ‘ರಮಣಶ್ರೀ ಶರಣ ಪ್ರಶಸ್ತಿ’ಗಳನ್ನು ಪ್ರಕಟಿಸಲಾಗಿದೆ.

‘ರಮಣಶ್ರೀ ಶರಣ ಜೀವಮಾನ ಸಾಧಕಿ ಪ್ರಶಸ್ತಿ’ಗೆ ಬೆಂಗಳೂರಿನ ಸಾಹಿತಿ ಜಯಾ ರಾಜಶೇಖರ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ.

ರಮಣಶ್ರೀ ಶರಣ ಹಿರಿಯ ಶ್ರೇಣಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ಬೆಂಗಳೂರಿನ ವಿಜಯಶ್ರೀ ಸಬರದ, ಆಧುನಿಕ ವಚನ ರಚನೆಗೆ ಚಿತ್ರದುರ್ಗದ ಎಚ್. ಲಿಂಗಪ್ಪ, ವಚನ ಸಂಗೀತಕ್ಕೆ ಕಲಬುರಗಿಯ ಜಯದೇವಿ ಜಂಗಮಶೆಟ್ಟಿ ಹಾಗೂ ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆಗೆ ಬೆಂಗಳೂರಿನ ವಚನಜ್ಯೋತಿ ಬಳಗ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ₹40 ಸಾವಿರ ನಗದು ಒಳಗೊಂಡಿದೆ.

ADVERTISEMENT

ರಮಣಶ್ರೀ ಶರಣ ಉತ್ತೇಜನ ಪ್ರಶಸ್ತಿ: ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆಗೆ ವಿಜಯಪುರ ಜಿಲ್ಲೆಯ ಉಷಾದೇವಿ ಉ. ಹಿರೇಮಠ, ಆಧುನಿಕ ವಚನ ರಚನೆಗೆ ಮೈಸೂರು ಜಿಲ್ಲೆಯ ಎಂ.ಬಿ. ಸಂತೋಷ್, ವಚನ ಸಂಗೀತಕ್ಕೆ ಬೆಂಗಳೂರಿನ ರಾಜು ಎಮ್ಮಿಗನೂರು, ಶರಣ ಸಂಸ್ಕೃತಿ ಪ್ರಸಾರ ಸೇವಾ ಸಂಸ್ಥೆಗೆ ಯಾದಗಿರಿ ಜಿಲ್ಲೆಯ ಸುರಪುರದ ಸಗರನಾಡು ಪ್ರಕಾಶನ ಆಯ್ಕೆಯಾಗಿದೆ. ಈ ಪ್ರಶಸ್ತಿಯು ತಲಾ ₹20 ಸಾವಿರ ನಗದು ಒಳಗೊಂಡಿದೆ. 

‘ರಮಣಶ್ರೀ ಶರಣ ಪ್ರೋತ್ಸಾಹ ಪುರಸ್ಕಾರ’ಕ್ಕೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಪ್ರಿಯಾಂಕಾ ಪ್ರವೀಣ ಹಾವೇರಿ ಆಯ್ಕೆಯಾಗಿದ್ದು, ಈ ಪ್ರಶಸ್ತಿಯು ₹ 10 ಸಾವಿರ ನಗದು ಒಳಗೊಂಡಿದೆ. 

ನವೆಂಬರ್‌ 17 ರಂದು ಬೆಳಿಗ್ಗೆ 11ಕ್ಕೆ ಬೆಂಗಳೂರಿನ ರಿಚ್ಮಂಡ್‌ ವೃತ್ತದಲ್ಲಿರುವ ರಮಣಶ್ರೀ ಹೋಟೆಲ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್. ಷಡಕ್ಷರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ. ಸೋಮಶೇಖರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.