ADVERTISEMENT

ನಟಿಸುವ ಆಸೆಯಿಂದ ತಲೆ ಬೋಳಿಸಿಕೊಂಡಿದ್ದೆ: ನಟ ರಮೇಶ್‌ ಅರವಿಂದ್‌

ನ್ಯಾಷನಲ್‌ ಹೈಸ್ಕೂಲ್‌ನ 101ನೆಯ ಶಾಲಾ ವಾರ್ಷಿಕೋತ್ಸವದಲ್ಲಿ ನೆನಪಿನ ಬುತ್ತಿ ಬಿಚ್ಚಿಟ್ಟ ನಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:54 IST
Last Updated 24 ಡಿಸೆಂಬರ್ 2018, 19:54 IST
   

ಬೆಂಗಳೂರು: ‘8ನೇ ತರಗತಿಯಲ್ಲಿದ್ದಾಗ ನನಗೆ ಹಾಗೂ ಸಹಪಾಠಿಗಳಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಬಂತು. ಆದರೆ, ಅದಕ್ಕಾಗಿ ತಲೆ ಬೋಳಿಸಿಕೊಳ್ಳಬೇಕು ಎಂದು ಷರತ್ತು ವಿಧಿಸಿದ್ದರು. ಕೆಲವು ಹುಡುಗರು ಹಿಂದೇಟು ಹಾಕಿದರು. ಆದರೆ ನಾನು ತಲೆ ಬೋಳಿಸಿಕೊಂಡು ಅಭಿನಯಿಸಿದೆ’

ನಟ ರಮೇಶ್‌ ಅರವಿಂದ್‌ ನ್ಯಾಷನಲ್‌ ಹೈಸ್ಕೂಲ್‌ನ 101ನೆಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸೋಮವಾರ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟ ಪರಿ ಇದು.

ಶಾಲೆಯಲ್ಲಿನ ನೆನಪುಗಳನ್ನು ಮೆಲುಕು ಹಾಕಿದ ಅವರು, ‘ಬೋಳುತಲೆಯೊಂದಿಗೆ ಮರುದಿನ ಶಾಲೆಗೆ ಬಂದಾಗ ಸಹಪಾಠಿಗಳು ರೇಗಿಸಿದ್ದರು. ಅವರಿಂದ ತಪ್ಪಿಸಿಕೊಳ್ಳಲು ಪುಸ್ತಕಗಳನ್ನು ಓದಲು ಶುರುವಿಟ್ಟುಕೊಂಡೆ’ ಎಂದು ಹೇಳಿದರು.

ADVERTISEMENT
ನಟ ರಮೇಶ್ ಅರವಿಂದ್ ನ್ಯಾಷನಲ್‌ ಹೈಸ್ಕೂಲ್‌ನ ವಿದ್ಯಾರ್ಥಿಗಳ ಜೊತೆ ಖುಷಿಯಿಂದ ಕಾಲ ಕಳೆದರು. -ಪ್ರಜಾವಾಣಿ ಚಿತ್ರ

‘ಅಪ್ಪನ ಕಾರ್ಯದಕ್ಷತೆ ಹಾಗೂ ಅಮ್ಮನ ಸಹನಶೀಲತೆಯನ್ನು ಮೈಗೂಡಿಸಿಕೊಂಡಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ವಿದ್ಯಾರ್ಥಿಗಳಲ್ಲಿ ವಿಶೇಷ ಶಕ್ತಿ ಇರುತ್ತದೆ. ಆಸೆಗೆ ತಕ್ಕ ಅರ್ಹತೆಗಳನ್ನು ಬೆಳೆಸಿಕೊಂಡರೆ ಸಾಧನೆ ಮಾಡಬಹುದು’ ಎಂದು ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.