ADVERTISEMENT

ಶಾಸಕನ ಮಗನೆಂದು ಪರಿಚಯಿಸಿ ಮೂವರು ಯುವತಿಯರ ಮೇಲೆ ಅತ್ಯಾಚಾರ, ಇನ್ನಿಬ್ಬರಿಗೆ ವಂಚನೆ

* ಶಾಸಕನ ಮಗನೆಂದು ಪರಿಚಯಿಸಿಕೊಂಡು ಕೃತ್ಯ * ಎಂಬಿಎ ಪದವೀಧರ ಬಂಧನ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 5:07 IST
Last Updated 23 ನವೆಂಬರ್ 2019, 5:07 IST
ಕಾರ್ತಿಕ್
ಕಾರ್ತಿಕ್   

ಬೆಂಗಳೂರು:ಶಾಸಕರೊಬ್ಬರ ಮಗನೆಂದು ಪರಿಚಯಿಸಿಕೊಂಡು ಯುವತಿಯೊಬ್ಬರ ಜೊತೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಆರೋಪಿ ಜಹಾಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ (30) ಎಂಬಾತ, ಇನ್ನೊಬ್ಬ ಯುವತಿ ಜೊತೆಗೆ ಇರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ತಮಿಳುನಾಡಿನ ತಿರುಚಿ ಜಿಲ್ಲೆಯ ವೀರೇಶ್ವರಂನ ನಿವಾಸಿ ಆಗಿರುವ ಆರೋಪಿ, ಎಂಬಿಎ ಪದವೀಧರ. ಈತನ ತಂದೆ ಕೇಂದ್ರ ಸರ್ಕಾರದ ನಿವೃತ್ತ ನೌಕರ. ಇದೇ 7ರಂದು 26 ವರ್ಷದ ಯುವತಿಯೊಬ್ಬರನ್ನು ಪರಿಚಯ ಮಾಡಿಕೊಂಡು ಕೃತ್ಯ ಎಸಗಿದ್ದ. ಆ ಸಂಬಂಧ ಯುವತಿ ನೀಡಿದ್ದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಇನ್‌ಸ್ಪೆಕ್ಟರ್ ಎಂ. ದಿವಾಕರ್ ನೇತೃತ್ವದ ತಂಡ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಹೇಳಿದರು.

ಹೋಟೆಲ್‌ನಲ್ಲಿ ಪರಿಚಯ: ‘ಸಂತ್ರಸ್ತ ಯುವತಿಯು ಎಂ.ಜಿ.ರಸ್ತೆಯ ಹೋಟೆಲೊಂದಕ್ಕೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ಆರೋಪಿ ತನ್ನನ್ನು ಶಾಸಕರ ಮಗನೆಂದು ಪರಿಚಯಿಸಿಕೊಂಡಿದ್ದ. ತಮ್ಮದೇ ಹೋಟೆಲ್ ಇದ್ದು, ಅಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ನಂತರ ಯುವತಿಯನ್ನು ತನ್ನದೇ ಕಾರಿನಲ್ಲಿ ಮಾರತ್ತಹಳ್ಳಿಯ ಹೊರವರ್ತುಲ ರಸ್ತೆ ಬಳಿಯಲ್ಲಿರುವ ಹೋಟೆಲೊಂದಕ್ಕೆ ಕರೆದೊಯ್ದಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಆರೋಪಿ ಒತ್ತಾಯಿಸಿದ್ದ. ಅದಕ್ಕೆ ಯುವತಿ ಒಪ್ಪಿರಲಿಲ್ಲ. ತನ್ನ ಬಳಿ ಪಿಸ್ತೂಲ್ ಇದ್ದು ಸಾಯಿಸುವುದಾಗಿ ಆರೋಪಿ ಬೆದರಿಕೆ ಹಾಕಿದ್ದ. ಯುವತಿ ಮೇಲೆ ಅತ್ಯಾಚಾರ ಸಹ ಎಸಗಿದ್ದ. ಹೋಟೆಲ್‌ನಿಂದ ತಪ್ಪಿಸಿಕೊಂಡಿದ್ದ ಯುವತಿ ಠಾಣೆಗೆ ದೂರು ನೀಡಿದ್ದರು.

ಮಹಿಳೆಯರ ಕೌಂಟರ್‌ನಲ್ಲಿ ಮದ್ಯ ಖರೀದಿ: ‘ಸೂಟು–ಬೂಟು ಧರಿಸಿ ಸ್ಕೋಡಾ ಕಾರಿನಲ್ಲಿ ಆರೋಪಿ ಮಾಲ್, ಹೋಟೆಲ್ ಹಾಗೂ ಪಬ್‌ಗೆ ಹೋಗುತ್ತಿದ್ದ. ಮಹಿಳೆಯರಿಗೆ ಮೀಸಲಿಟ್ಟ ಕೌಂಟರ್‌ಗೆ ತೆರಳಿ ಸಾಮಗ್ರಿ ಖರೀದಿಸುತ್ತಿದ್ದ. ಪುರುಷರ ಕೌಂಟರ್‌ಗೆ ಹೋಗುವಂತೆ ಸಿಬ್ಬಂದಿ ಸೂಚಿಸಿದಾಗ, ತಾನೊಬ್ಬ ಉದ್ಯಮಿ ಹಾಗೂ ಶಾಸಕನ ಮಗನೆಂದು ಹೇಳಿ ಟಿಪ್ಸ್‌ ರೀತಿಯಲ್ಲಿ ಹಣ ಕೊಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಯುವತಿಯರನ್ನು ಮಾತನಾಡಿಸುತ್ತಿದ್ದ ಆರೋಪಿ ತನ್ನದೊಂದು ಅಂತರರಾಷ್ಟ್ರೀಯ ದರ್ಜೆಯ ಹೋಟೆಲ್‌ ಇದೆ. ಕೆಲಸಕ್ಕಾಗಿ ಸುಂದರ ಹುಡುಗಿಯರು ಬೇಕಾಗಿದ್ದಾರೆ. ಲಕ್ಷ ಸಂಬಳವಿದೆ ಎಂಬುದಾಗಿ ಹೇಳುತ್ತಿದ್ದ. ಅದನ್ನು ನಂಬಿ ಯುವತಿಯರು ಕೆಲಸ ಕೊಡಿಸುವಂತೆ ದುಂಬಾಲು ಬೀಳುತ್ತಿದ್ದರು. ಅಂಥ ಯುವತಿಯರನ್ನೇ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗುತ್ತಿದ್ದ’ ಎಂದು ತಿಳಿಸಿದರು.

‘ಹಲಸೂರು, ಮಹದೇವಪುರ ಹಾಗೂ ಚೆನ್ನೈನ ಠಾಣೆಯೊಂದರ ವ್ಯಾಪ್ತಿಯಲ್ಲಿ ಮೂವರು ಯುವತಿಯರ ಮೇಲೆ ಆರೋಪಿ ಅತ್ಯಾಚಾರ ಎಸಗಿದ ಬಗ್ಗೆ ಪ್ರಕರಣ ದಾಖಲಾಗಿದೆ. ಇನ್ನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಇಬ್ಬರಿಗೆ ಕೆಲಸ ಕೊಡಿಸುವುದಾಗಿ ಆಮಿಷ ಒಡ್ಡಿ ವಂಚಿಸಿದ್ದಾನೆ. 2017ರಲ್ಲೇ ಆರೋಪಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿ ಬೆಂಗಳೂರಿಗೆ ಬಂದು ಕೃತ್ಯ ಮುಂದುವರಿಸಿದ್ದ’ ಎಂದು ಹೇಳಿದರು.

‘ಯುವತಿಯೊಬ್ಬರ ಜೊತೆ ಇರುವಾಗಲೇ ಆತ ನಮಗೆ ಸಿಕ್ಕಿಬಿದ್ದಿದ್ದಾನೆ. ಜೊತೆಗಿದ್ದ ಯುವತಿ ಬಳಿಯೂ ತಾನು ಶಾಸಕನ ಮಗನೆಂದು ಹೇಳಿಕೊಂಡಿದ್ದ.ಯುವತಿ ಜೊತೆ ಸಲುಗೆ ಬೆಳೆಸಿದ್ದ ಆತ ಕೆಲಸ ಕೊಡಿಸುವುದಾಗಿ ಹೇಳಿ ಆಕೆಯನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಲು ಸಂಚು ರೂಪಿಸಿದ್ದ. ಅಷ್ಟರಲ್ಲೇ ಆತನನ್ನು ಬಂಧಿಸಲಾಯಿತು. ಈಗ ಆ ಯುವತಿಯೂ ದೂರು ನೀಡಿದ್ದು, ಆತನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.