ADVERTISEMENT

ನಾಲ್ಕೂವರೆ ವರ್ಷಗಳ ನಂತರಅತ್ಯಾಚಾರ ಆರೋಪಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 20:06 IST
Last Updated 12 ಆಗಸ್ಟ್ 2019, 20:06 IST

ಬೆಂಗಳೂರು: ಏಳು ಹುಡುಗರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಆರೋಪ ಪ್ರಕರಣದಲ್ಲಿ, ‘ಸಂತ್ರಸ್ತ ಬಾಲಕಿ ವಿಚಾರಣಾ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನುಡಿದಿದ್ದಾಳೆ’ ಎಂಬ ಕಾರಣಕ್ಕೆ ನಾಲ್ಕೂವರೆ ವರ್ಷಗಳಿಂದ ಜೈಲಿನಲ್ಲಿದ್ದ ಆರೋಪಿಗೆ ಹೈಕೋರ್ಟ್‌ ಜಾಮೀನು ನೀಡಿದೆ.

ಈ ಕುರಿತಂತೆ ಬಂಧನದಲ್ಲಿದ್ದ ನಗರದ ಸಂತೋಷ್‌ (22) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು ₹ 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್‌ ಸೇರಿದಂತೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರ ಸಂತೋಷ್‌ ಪರ ವಕೀಲ ಸಿ.ವಿ.ಗಜೇಂದ್ರ, ‘ಸಂತ್ರಸ್ತ ಬಾಲಕಿ ನಾಲ್ಕು ವರ್ಷಗಳ ನಂತರ ನ್ಯಾಯಾಲಯದ ಮುಂದೆ ತನ್ನ ಹೇಳಿಕೆ ನೀಡಿದ್ದಾಳೆ. ಅಂತೆಯೇ ಆಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಆರೋಪಿಯನ್ನೂ ಗುರುತಿಸಿಲ್ಲ’ ಎಂದು ಮಂಡಿಸಿದ್ದ ವಾದವನ್ನು ನ್ಯಾಯಪೀಠ ಪುರಸ್ಕರಿಸಿದೆ.

ADVERTISEMENT

ಪ್ರಕರಣವೇನು?: ‘ಈ ಘಟನೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2015ರ ಮಾರ್ಚ್‌ನಲ್ಲಿ ನಡೆದಿತ್ತು’ ಎಂದು ಪೊಲೀಸರು ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಮೊದಲಿಗೆ ಮೂವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.

‘ತನಿಖೆಯ ನಂತರ ಮತ್ತೆ ನಾಲ್ವರನ್ನು ಆರೋಪಿಗಳು ಎಂದು ಪರಿಗಣಿಸಲಾಗಿದೆ’ ಎಂದು ಏಳೂ ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೇರಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳಿಗೆ ರಕ್ಷಣೆ ಕಾಯ್ದೆ–2012ರ (ಪೊಕ್ಸೊ) ವಿವಿಧ ಕಲಂಗಳಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

‘ಘಟನೆ ನಡೆದಾಗ ಬಾಲಕಿಗೆ 15 ವರ್ಷವಾಗಿತ್ತು. ಮುಖ್ಯ ಆರೋಪಿ ಬಾಲಕಿಯನ್ನು ಏಳನೇ ಆರೋಪಿಯ ಮನೆಗೆ ಕರೆದುಕೊಂಡು ಹೋಗಿ ಆಕೆಯೊಂದಿಗೆ ಬಲವಂತದ ಸಂಭೋಗ ನಡೆಸಿದ್ದ. ಎರಡು ದಿನಗಳ ನಂತರ ಪುನಃ ಸಂಭೋಗಿಸಿದ್ದ. ನಂತರ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಸಂತೋಷ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ. ಅದೇ ದಿನ ನಾಲ್ವರು ಮತ್ತೆ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.