ADVERTISEMENT

ಸಲೂನ್‌ನಲ್ಲಿದ್ದ ಭೂಗತ ಪಾತಕಿ !

‘ಆಪರೇಷನ್ ರವಿ ಪೂಜಾರಿ’ ಹೆಸರಿನಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 4:15 IST
Last Updated 2 ಫೆಬ್ರುವರಿ 2019, 4:15 IST
ರವಿ ಪೂಜಾರಿ
ರವಿ ಪೂಜಾರಿ   

ಬೆಂಗಳೂರು: ಪಶ್ಚಿಮ ಆಫ್ರಿಕಾದ ಸೆನೆಗಲ್‌ ದೇಶದ ರಾಜಧಾನಿ ಡಕಾರ್‌ನ ಸಲೂನ್‌ಗೆ ಭೂಗತ ಪಾತಕಿ ರವಿ ಪೂಜಾರಿ ಬಂದಿದ್ದ ವೇಳೆ ಇಂಟರ್‌ಪೋಲ್‌ ಅಧಿಕಾರಿಗಳ ನೇತೃತ್ವದಲ್ಲಿ ಶಸ್ತ್ರಸಜ್ಜಿತವಾಗಿ ಕಾರ್ಯಾಚರಣೆ ನಡೆಸಿದ ಸ್ಥಳೀಯ 50ಕ್ಕೂ ಹೆಚ್ಚು ಪೊಲೀಸರು, ಆತನನ್ನು ಸೆರೆ ಹಿಡಿದಿದ್ದಾರೆ.

ಒಂದು ತಿಂಗಳಿನಿಂದ ಪೂಜಾರಿಯ ಮನೆ ಮೇಲೆ ಕಣ್ಣಿಟ್ಟಿದ್ದ ಪೊಲೀಸರು, ಆತನ ಚಲನವಲನ ಹಾಗೂ ಜೊತೆಗಿರುವ ಸಹಚರರ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಜ. 19ರಂದು ಬೆಳಿಗ್ಗೆ ಆತ, ಕ್ಷೌರಿಕ ಅಂಗಡಿಗೆ ಬಂದಿದ್ದ. ಮೂರು ವ್ಯಾನ್‌ಗಳಲ್ಲಿ ಶಸ್ತ್ರಸಜ್ಜಿತರಾಗಿ ಸ್ಥಳಕ್ಕೆ ಹೋಗಿದ್ದ ಪೊಲೀಸರು ಅಂಗಡಿಯನ್ನು ಸುತ್ತುವರೆದು ಆತನನ್ನು ಬಂಧಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ಮೊದಲೇ ಭಾರತೀಯ ರಾಯಭಾರಿ ನೀಡಿದ್ದ ದಾಖಲೆಗಳನ್ನು ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದರು. ಅವುಗಳನ್ನು ಪರಿಶೀಲಿಸಿದ ನ್ಯಾಯಾಲಯ, ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ಜ. 21ರಂದು ಒಪ್ಪಿಗೆ ಸೂಚಿಸಿತು. ಭಾರತದ ತನಿಖಾ ಸಂಸ್ಥೆಗಳಿಂದ ಸೂಕ್ತ ದಾಖಲೆ ಸಂಗ್ರಹಿಸಿ ಆತನನ್ನು ಹಸ್ತಾಂತರಿಸುವಂತೆ ಸೂಚಿಸಿತು. ಸದ್ಯ ಹಸ್ತಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ. ಕರ್ನಾಟಕ, ಮಹಾರಾಷ್ಟ್ರ, ಕೇರಳ, ಗುಜರಾತ್‌ ರಾಜ್ಯದ ಪೊಲೀಸರಿಗೆ ಆತ ಬೇಕಿದ್ದಾನೆ.

ADVERTISEMENT

ಶ್ರೀಲಂಕಾ ಪ್ರಜೆಯೆಂದು ವಾಸ: ‘ನನ್ನ ಹೆಸರು ಆಂಟೋನಿ ಫರ್ನಾಂಡೀಸ್‌, ಶ್ರೀಲಂಕಾ ಪ್ರಜೆ’ ಎಂದು ಹೇಳಿಕೊಂಡಿದ್ದ ರವಿ ಪೂಜಾರಿ, ತನ್ನ ಪತ್ನಿ ಹಾಗೂ ಮಗನ ಹೆಸರಿನಲ್ಲಿ ಬುರ್‌ಕಿನ್ ಫಾಸೊ ದೇಶದ ರಹದಾರಿ ಪತ್ರ ಪಡೆದಿದ್ದ. ಪಶ್ಚಿಮ ಆಫ್ರಿಕಾದ ಕೊನಾಕ್ರಿ, ಬುರ್‌ಕಿನ್‌ ಫಾಸೊ, ಸೆನೆಗಲ್, ಐವರಿ ಕೋಸ್ಟ್‌ದಲ್ಲಿ ಉತ್ತರ ಭಾರತೀಯರು ನಡೆಸುತ್ತಿರುವ ರೆಸ್ಟೋರಂಟ್‌ಗಳಲ್ಲಿ ಆತ ಪಾಲುದಾರಿಕೆ ಹೊಂದಿದ್ದ.

ಆ ಬಗ್ಗೆ ಮಾಹಿತಿ ಕಲೆಹಾಕಿದ್ದ ರಾಜ್ಯ ಗುಪ್ತಚರ ವಿಭಾಗದ ಎಡಿಜಿಪಿ ಅಮರ್‌ಕುಮಾರ್ ಪಾಂಡೆ, ಸೆನೆಗಲ್ ದೇಶದ ಭಾರತದ ರಾಯಭಾರಿ ರಾಜೀವ್ ಕುಮಾರ್‌ ಅವರಿಗೆ ಮಾಹಿತಿ ನೀಡಿದ್ದರು. ಅವರು ಸೆನೆಗಲ್ ರಾಷ್ಟ್ರಪತಿ ಕಚೇರಿಗೆ ವಿಷಯ ತಿಳಿಸಿದ್ದರು. ಅದರಿಂದ ಎಚ್ಚೆತ್ತ ಇಂಟರ್‌ಪೋಲ್‌ ಹಾಗೂ ಸೆನೆಗಲ್ ಪೊಲೀಸರು, ‘ಆಪರೇಷನ್ ರವಿ ಪೂಜಾರಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

ರಾಜ್ಯದಲ್ಲಿ 97 ಪ್ರಕರಣ:ಪೂಜಾರಿ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11 ಸೇರಿದಂತೆ ರಾಜ್ಯದಾದ್ಯಂತ 97 ಪ್ರಕರಣಗಳು ದಾಖಲಾಗಿವೆ.ಮೈಸೂರು, ಹುಬ್ಬಳ್ಳಿ–ಧಾರವಾಡ, ಕೋಲಾರ, ಶಿವಮೊಗ್ಗದಲ್ಲೂ ಆತನ ವಿರುದ್ಧ ಪ್ರಕರಣಗಳಿವೆ.

ಬೆಂಗಳೂರಿನ ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಶೈಲಜಾ ಮತ್ತು ಶಬ್ನಮ್ ಡೆವೆಲಪರ್ಸ್‌ನ ರವಿ ಎಂಬುವರ ಕೊಲೆ ಪ್ರಕರಣದಲ್ಲೂ ಪೂಜಾರಿ ಆರೋಪಿಯಾಗಿದ್ದಾನೆ. ಆತನ ಸಹಚರರಿಗೆ ಈಗಾಗಲೇ ಜೀವಾವಧಿ ಶಿಕ್ಷೆ ಹಾಗೂ ಕಠಿಣ ಶಿಕ್ಷೆ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.