ADVERTISEMENT

ಸಮಗ್ರ ಆರೋಗ್ಯ ಕಾಳಜಿ ವ್ಯವಸ್ಥೆ ಬೇಕು

ಎಐಸಿಒಜಿ 62ನೇ ಸಮ್ಮೇಳನದಲ್ಲಿ ರವಿಶಂಕರ್‌ ಗುರೂಜಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:07 IST
Last Updated 9 ಜನವರಿ 2019, 19:07 IST
ಪ್ರಸೂತಿ ತಜ್ಞರ ಸಮ್ಮೇಳನದಲ್ಲಿ ರವಿಶಂಕರ್‌ ಗುರೂಜಿ ಮಾತನಾಡಿದರು. ನಟಿ ಡಯಾನಾ ಹೇಡನ್‌, ಎಐಸಿಒಜಿ ಅಧ್ಯಕ್ಷೆ ನಂದಿತಾ ಪಾಲಶೆಟ್ಕರ್‌, ಜೈದೀಪ್‌ ಮಲ್ಹೋತ್ರಾ ಇದ್ದರು --–ಪ್ರಜಾವಾಣಿ ಚಿತ್ರ
ಪ್ರಸೂತಿ ತಜ್ಞರ ಸಮ್ಮೇಳನದಲ್ಲಿ ರವಿಶಂಕರ್‌ ಗುರೂಜಿ ಮಾತನಾಡಿದರು. ನಟಿ ಡಯಾನಾ ಹೇಡನ್‌, ಎಐಸಿಒಜಿ ಅಧ್ಯಕ್ಷೆ ನಂದಿತಾ ಪಾಲಶೆಟ್ಕರ್‌, ಜೈದೀಪ್‌ ಮಲ್ಹೋತ್ರಾ ಇದ್ದರು --–ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಸೂತಿಪೂರ್ವ ಮತ್ತು ನಂತರದಲ್ಲಿ ತಾಯಿಯ ಆರೈಕೆಗೆ ಸಮಗ್ರ ಆರೋಗ್ಯ ಕಾಳಜಿ ವ್ಯವಸ್ಥೆ ಬರಬೇಕು ಎಂದು ಆರ್ಟ್‌ ಆಫ್‌ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ಶ್ರೀ ರವಿಶಂಕರ್‌ ಗುರೂಜಿ ಹೇಳಿದರು.

ಅರಮನೆ ಮೈದಾನದಲ್ಲಿ ಆಲ್‌ ಇಂಡಿಯಾ ಕಾಂಗ್ರೆಸ್‌ ಆಫ್‌ ಒಬೆಸ್ಟೆಟ್ರಿಕ್ಸ್‌ ಆ್ಯಂಡ್‌ ಗೈನಕಾಲಜಿಯ (ಎಐಸಿಒಜಿ) 62ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ವೈದ್ಯಕೀಯ ಪದ್ಧತಿ ಇರಲಿ. ಜತೆಗೆ ಆಯುರ್ವೇದ, ಯೋಗ ಪದ್ಧತಿಗಳ ಅಂಶಗಳನ್ನು ಸೇರಿಸಿಕೊಂಡು ಸಮಗ್ರ ಪದ್ಧತಿಯಲ್ಲಿ ಆರೈಕೆ ಮಾಡಬೇಕು. ಪ್ರಸೂತಿಪೂರ್ವ ಹಾಗೂ ನಂತರದಲ್ಲಿ ಹೆಣ್ಣಿನ ಮಾನಸಿಕ ಆರೋಗ್ಯ ಕಾಪಾಡುವುದು ಬಹಳ ಮುಖ್ಯ’ ಎಂದು ಅವರು ಹೇಳಿದರು.

ADVERTISEMENT

ನಿಮಗಾಗಿ ಸಮಯ ಮೀಸಲಿಡಿ: ‘ಅಧ್ಯಯನವೊಂದರ ಪ್ರಕಾರ ವಿಶ್ವದ ವೈದ್ಯರ ಪೈಕಿ ಶೇ 67ರಷ್ಟು ಜನ ತಾವೇ ಆರೋಗ್ಯ ಸಮಸ್ಯೆಯನ್ನು ಹೊಂದಿದ್ದಾರೆ. ಮೊದಲು ನಿಮ್ಮ ಬಗೆಗೂ ಕಾಳಜಿ ವಹಿಸಬೇಕು. ವರ್ಷದಲ್ಲಿ ಒಂದು ವಾರವಾದರೂ ನಿಮ್ಮ ಮನೋಲ್ಲಾಸ ವೃದ್ಧಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಯೋಗ, ಧ್ಯಾನ, ಸಕಾರಾತ್ಮಕ ಚಿಂತನೆಗಳು ಸದಾ ಇರಬೇಕು. ದಿನಕ್ಕೆ ಎರಡು ಬಾರಿ 20 ನಿಮಿಷಗಳ ಕಾಲ ಧ್ಯಾನ ಮಾಡಿದರೂ ಮನಸ್ಸು ಚೈತನ್ಯದಿಂದ ತುಂಬಿರುತ್ತದೆ’ ಎಂದು ಅವರು ಹೇಳಿದರು.

ವೈದ್ಯರಿಗೆ ಸಲಹೆ: ‘ಚರಕಸಂಹಿತೆಯಂತಹ ಪುರಾತನ ವೈದ್ಯಕೀಯ ಪದ್ಧತಿಗಳನ್ನೂ ಅಧ್ಯಯನ ಮಾಡಬೇಕು. ಅಲ್ಪಕಾಲಿಕ ಕೋರ್ಸ್‌ಗಳನ್ನೂ ಮಾಡಬಹುದು. ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವ, ಪೌಷ್ಟಿಕ ಆಹಾರ ಒದಗಿಸುವ ಯೋಜನೆಗಳನ್ನು ರೂಪಿಸಬೇಕು. ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.