ಬೆಂಗಳೂರು: ‘ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ನಾನೂ ಸಿದ್ಧನಾಗಿದ್ದೇನೆ. ನಮ್ಮ ಅಧಿಕಾರಿಗಳೂ ಸಿದ್ಧರಾಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಟ್ಯಾನರಿ ರಸ್ತೆಯ ವೈಟ್ ಟ್ಯಾಪಿಂಗ್ ಕಾಮಗಾರಿ ಸೇರಿ ನಗರದ ವಿವಿಧ ಕಾಮಗಾರಿಗಳನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಮಳೆಗಾಲದ ಪರಿಸ್ಥಿತಿ ನಿರ್ವಹಣೆಗೆ ಬೇಕಾದ ಎಲ್ಲ ತೀರ್ಮಾನಗಳನ್ನು ಈಗಾಗಲೇ ಕೈಗೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.
‘ವೈಟ್ ಟ್ಯಾಪಿಂಗ್ ನಡೆಯುತ್ತಿರುವ ರಸ್ತೆಗಳ ಗುಣಮಟ್ಟ ಚೆನ್ನಾಗಿರಬೇಕು. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರಬೇಕು. ಹೀಗಾಗಿ ನಾನು ಆಗಾಗ್ಗೆ ಕಾಮಗಾರಿಗಳ ಪರಿಶೀಲನೆ ಮಾಡುತ್ತಿದ್ದೇನೆ. ಅಧಿಕಾರಿಗಳು ತೋರಿಸುವ ಜಾಗದಲ್ಲಿ ಪರಿಶೀಲನೆ ಮಾಡುವುದಿಲ್ಲ, ನಾನು ಎಲ್ಲಿ ಹೇಳುತ್ತೇನೋ ಅಲ್ಲಿ ನಿಲ್ಲಿಸಿ ಪರಿಶೀಲನೆ ಮಾಡಲಾಗುವುದು. ಈಗ ಪರಿಶೀಲನೆ ಮಾಡಿದಾಗ ಅರ್ಧ ಅಡಿ ರಸ್ತೆ ಇದೆ. ಈ ರಸ್ತೆಯಲ್ಲಿ ನೀರು, ಕೇಬಲ್‌ಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಎಲ್ಲ ಸ್ಥಳೀಯ ಶಾಸಕರು ಸಹಕಾರ ನೀಡುತ್ತಿದ್ದಾರೆ’ ಎಂದು ತಿಳಿಸಿದರು.
‘ಕಸ ವಿಲೇವಾರಿ ಟೆಂಡರ್ ಕರೆಯಲು ಇದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಾಲ್ಕು ತಿಂಗಳ ಒಳಗೆ ಟೆಂಡರ್ ಕರೆಯಬೇಕು ಎಂದು ನ್ಯಾಯಾಲಯ ಅವಕಾಶ ನೀಡಿದ್ದು, ನಾವು ಟೆಂಡರ್ ಕರೆದು ಕಸ ವಿಲೇವಾರಿ ಕೆಲಸ ಮಾಡುತ್ತೇವೆ. ಒಂದೇ ಮನೆಯಲ್ಲಿ ಕೂತು ಕೆಲವರು ಟೆಂಡರ್ ಹಾಕಿರುವ ದಾಖಲೆಗಳು ನಮಗೆ ಸಿಕ್ಕಿವೆ. ಅವರು ವಿರೋಧ ಪಕ್ಷದವರ ಬಳಿ ಹೋಗಿ ದೂರು ನೀಡಿದ್ದರು. ಈಗಲೂ ಏನೇನೋ ತಂತ್ರ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ನಾವು ಶುದ್ಧ ಆಡಳಿತ ಕೊಟ್ಟು ಸ್ವಚ್ಛ ಬೆಂಗಳೂರು ನಿರ್ಮಾಣ ಮಾಡುತ್ತೇವೆ. ಒಂದೇ ದಿನ ಎಲ್ಲ ಬದಲಾವಣೆ ಉಂಟಾಗುವುದಿಲ್ಲ. ಸುರಂಗ ಮಾರ್ಗ, ಮೇಲ್ಸೇತುವೆ, ಕೆಳಸೇತುವೆಗಳನ್ನು ಹಂತಹಂತವಾಗಿ ಮಾಡಲಾಗುವುದು’ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.