ADVERTISEMENT

ಕೊರೊನಾ ಸೋಂಕಿತರಿಗೆ ಆಸ್ಪತ್ರೆ ಚಿಕಿತ್ಸಾ ಅವಧಿ ಕಡಿತ

ಹಾಸಿಗೆ ಸಮಸ್ಯೆಯಿಂದಾಗಿ ರೋಗಿಗಳ ಸ್ಥಳಾಂತರ l ತೀವ್ರ ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರಿಕೆ

ವರುಣ ಹೆಗಡೆ
Published 1 ಮೇ 2021, 22:07 IST
Last Updated 1 ಮೇ 2021, 22:07 IST
   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚಳವಾಗುತ್ತಿರುವ ಪರಿಣಾಮ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ತಲೆದೋರಿದೆ. ಇದರಿಂದಾಗಿ ಆಸ್ಪತ್ರೆಗಳು ದಾಖಲಾದ ಸೋಂಕಿತರನ್ನು ನಾಲ್ಕರಿಂದ ಐದು ದಿನಗಳಿಗೇ ಮನೆಗೆ ಕಳುಹಿಸುತ್ತಿವೆ.

ಒಂದು ತಿಂಗಳಿಂದ ನಗರದಲ್ಲಿ ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದು, ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಏಪ್ರಿಲ್ ತಿಂಗಳಲ್ಲಿ 3.30 ಲಕ್ಷ ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಎದುರಿಸುವವರ ಸಂಖ್ಯೆ ಹೆಚ್ಚಳವಾಗಿದ್ದರಿಂದ ಆಮ್ಲಜನಕ ಸಹಿತ ಹಾಸಿಗೆಗಳಿಗೆ ಬೇಡಿಕೆ ಹೆಚ್ಚಿದೆ. ಸೋಂಕು ಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಗೋಚರಿಸಿರುವ ವ್ಯಕ್ತಿಗಳನ್ನು ಮಾತ್ರ ದಾಖಲಿಸಿಕೊಂಡು ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದವರಿಗೆ ಹೋಟೆಲ್‌ ಸೇರಿದಂತೆ ವಿವಿಧೆಡೆ ತಾತ್ಕಾಲಿಕವಾಗಿ ನಿರ್ಮಿಸಿರುವ ಕೋವಿಡ್ ಆರೈಕೆ ಕೇಂದ್ರಗಳಿಗೆ ಶಿಫಾರಸು ಮಾಡಲಾಗುತ್ತಿದೆ.

ಕೋವಿಡ್ ಕಾಯಿಲೆ ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ 17 ದಿನಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಬಳಿಕ ಈ ಅವಧಿಯನ್ನು 10 ದಿನಗಳಿಗೆ ಇಳಿಕೆ ಮಾಡಿ, 7 ದಿನಗಳು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಸೂಚಿಸಲಾಗುತ್ತಿತ್ತು. ಕಳೆದ ವರ್ಷಾಂತ್ಯಕ್ಕೆ ಈ ಅವಧಿಯನ್ನು 7 ದಿನಗಳಿಗೆ ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ಚೇತರಿಸಿಕೊಳ್ಳದವರಿಗೆ ಇನ್ನಷ್ಟು ದಿನ ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಲಾಗುತ್ತಿತ್ತು. ಈಗ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2.50 ಲಕ್ಷ ದಾಟಿದೆ. ಇವರಲ್ಲಿ ಶೇ 10ರಷ್ಟು ಮಂದಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದ್ದು, ಸರ್ಕಾರಿ ವ್ಯವಸ್ಥೆಯಡಿ ಆಸ್ಪತ್ರೆಗಳಲ್ಲಿ 1,616 ಹಾಸಿಗೆಗಳು ಮಾತ್ರ ಲಭ್ಯವಿದೆ.

ADVERTISEMENT

ಎಲ್ಲ ಐಸಿಯು ಹಾಸಿಗೆಗಳು ಭರ್ತಿಯಾಗುತ್ತಿವೆ. ಹೀಗಾಗಿ, ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಂತೆ ಕೋವಿಡ್ ಆರೈಕೆ ಕೇಂದ್ರ ಅಥವಾ ಮನೆಗೆ ಸ್ಥಳಾಂತರಗೊಳ್ಳಲು ಶಿಫಾರಸು ಮಾಡಲಾಗುತ್ತಿದೆ. ಕೆಲವರನ್ನು ದಾಖಲಾದ ಮೂರು ದಿನಗಳಿಗೇ ಮನೆಗೆ ಕಳುಹಿಸಿ, ನಿಗಾ ವ್ಯವಸ್ಥೆಗೆ ಒಳಪಡಲು ಸೂಚಿಸಲಾಗುತ್ತಿದೆ.

ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ: ‘ಎಲ್ಲ ಕೋವಿಡ್ ಪೀಡಿತರಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವುದಿಲ್ಲ. ಒಂದು ವೇಳೆ ಎಲ್ಲರನ್ನೂದಾಖಲಿಸಿಕೊಂಡಲ್ಲಿ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆ ಆಗಲಿದೆ. ಹಾಗಾಗಿ, ಸೋಂಕಿಗೆ ಅಸ್ವಸ್ಥಗೊಂಡವರನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗುತ್ತದೆ. ಸತತ ಮೂರು ದಿನಗಳಿಂದ ಕಾಯಿಲೆಯ ಗುಣ ಲಕ್ಷಣಗಳನ್ನು ಹೊಂದಿಲ್ಲದಿದ್ದರೆ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ 95ಕ್ಕಿಂತ ಹೆಚ್ಚಿದ್ದಲ್ಲಿ ಕೋವಿಡ್ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ವ್ಯವಸ್ಥೆಯಿದ್ದಲ್ಲಿ ಮನೆಯಲ್ಲೂ ಚಿಕಿತ್ಸೆ ಪಡೆದುಕೊಳ್ಳಬಹುದು. ಬಳಿಕ 7 ದಿನಗಳು ಸ್ವಯಂ ನಿಗಾ ವ್ಯವಸ್ಥೆಗೆ ಒಳಪಡಲು ಸೂಚಿಸಲಾಗುತ್ತಿದೆ’ ಎಂದು ಕೆ.ಸಿ. ಜನರಲ್ ಆಸ್ಪತ್ರೆಯ ಕೋವಿಡ್ ವಿಭಾಗದ ನೋಡಲ್ ಅಧಿಕಾರಿ ಡಾ. ಲಕ್ಷ್ಮೀಪತಿ ತಿಳಿಸಿದರು.

‘ರಕ್ತದಲ್ಲಿನ ಆಮ್ಲಜನಕ ಪ್ರಮಾಣ 94ಕ್ಕಿಂತ ಕಡಿಮೆಯಿದ್ದಲ್ಲಿ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುತ್ತದೆ. ಅಂತಹವರ ಆರೋಗ್ಯ ಸ್ಥಿರವಾಗುವವರೆಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಬಳಿಕ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಇರಿಸಿ, ಮನೆಗೆ ಕಳುಹಿಸಲಾಗುತ್ತದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವ ಪರಿಣಾಮ ಜೀವಕ್ಕೆ ಅಪಾಯ ಇರುವವರನ್ನು ತುರ್ತಾಗಿ ದಾಖಲಿಸಿಕೊಂಡು, ಚಿಕಿತ್ಸೆ ಒದಗಿಸಬೇಕು. ಹೀಗಾಗಿ, ಅಂತಹವರಿಗೆ ಹಾಸಿಗೆ ಕಾಯ್ದಿರಿಸಬೇಕಾಗುತ್ತದೆ’ ಎಂದು ಬೆಂಗಳೂರು ನಗರ ಜಿಲ್ಲೆ ಆರೋಗ್ಯಾಧಿಕಾರಿ ಡಾ.ಜಿ. ಶ್ರೀನಿವಾಸ್ ವಿವರಿಸಿದರು.

ಸೋಂಕಿತರಿಗೆ ಸ್ಥಳಾಂತರದ ಕಿರಿಕಿರಿ
ಕೋವಿಡ್‌ ಪೀಡಿತರಿಗೆ ಜ್ವರ ಸೇರಿದಂತೆ ಕಾಯಿಲೆಯ ಲಕ್ಷಣಗಳು ಕಡಿಮೆಯಾಗುತ್ತಿದ್ದಂತೆ ಕೋವಿಡ್‌ ಆರೈಕೆ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇದರಿಂದ ಸೋಂಕಿತರು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಲು ದುಂಬಾಲು ಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಹತ್ತಿರದ ಹೋಟೆಲ್‌ಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ನಿರ್ಮಿಸಿದ್ದು, ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಂತೆ ಅಲ್ಲಿಗೆ ಸ್ಥಳಾಂತರ ಮಾಡುತ್ತಿವೆ.

‘ಹಾಸಿಗೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾಗಿದೆ. ಬಳಿಕ ಹಾಸಿಗೆ ಸಿಕ್ಕರೂ ನಾಲ್ಕರಿಂದ ಐದು ದಿನಗಳಿಗೆ ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಇದರಿಂದಾಗಿ ಚಿಕಿತ್ಸೆ ಸಮಸ್ಯೆಯಾಗುತ್ತಿದೆ’ ಎಂದು ಜಯನಗರದ 55 ವರ್ಷದ ಕೋವಿಡ್ ಪೀಡಿತ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.