ADVERTISEMENT

ವಿದೇಶ ಯಾತ್ರೆ ನೋಂದಣಿ ಕಡ್ಡಾಯ: ಮುಜರಾಯಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 19:15 IST
Last Updated 4 ಜುಲೈ 2018, 19:15 IST

ಬೆಂಗಳೂರು: ವಿದೇಶಗಳಿಗೆ ಯಾತ್ರೆ ಕೈಗೊಳ್ಳುವವರು ಮುಜರಾಯಿ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಪ್ರಸ್ತಾವವನ್ನು ಕಂದಾಯ ಇಲಾಖೆ ಸರ್ಕಾರದ ಮುಂದಿಟ್ಟಿದೆ.

ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿರುವ 1.75 ಲಕ್ಷ ಜನ ಭಾರಿ ಮಳೆ ಹಾಗೂ ಭೂ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾವ ಮುಂದಿಡಲಾಗಿದೆ.

234 ಜನ ರಾಜ್ಯದ ಯಾತ್ರಿಗಳು ಸಿಲುಕಿದ್ದಾರೆ. ಇವರು ಮುಜರಾಯಿ ಇಲಾಖೆಯಲ್ಲಿ ನೋಂದಾಯಿಸಿಕೊಂಡವರು. ಉಳಿದ ಅನೇಕರು ಖಾಸಗಿ ಪ್ರವಾಸಿ ಏಜೆನ್ಸಿ ಮೂಲಕ ಹೋಗಿದ್ದಾರೆ. ಅವರ ಬಗ್ಗೆ ದಾಖಲೆಗಳೇ ಇಲ್ಲ. ಇಲಾಖೆ ಮತ್ತು ರಕ್ಷಣಾ ತಂಡಗಳ ಜತೆ ಸುದೀರ್ಘವಾಗಿ ಚರ್ಚಿಸಿದಾಗ ಈ ಯೋಚನೆ ಹೊಳೆದಿದೆ. ಈ ಪ್ರಸ್ತಾವಕ್ಕೆ ಸರ್ಕಾರ ಮುಂದೆ ಸಮ್ಮತಿಸುವ ಸಾಧ್ಯತೆ ಇದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ನಾವು 35ಕ್ಕೂ ಹೆಚ್ಚು ಕರೆ ಸ್ವೀಕರಿಸಿದ್ದೇವೆ. ಯಾತ್ರಿಗಳ ಬಗ್ಗೆ ಯಾವುದೇ ದಾಖಲೆ ಇಲ್ಲದ ಕಾರಣ ಮಾಹಿತಿ ಒದಗಿಸಲು ಅಸಹಾಯಕರಾಗಿದ್ದೇವೆ. ಇಂಥ ಪ್ರಕರಣಗಳು ಮರುಕಳಿಸಬಾರದು. ಅದಕ್ಕಾಗಿ ಎಲ್ಲ ಪ್ರವಾಸ ನಿರ್ವಾಹಕರು ಕಡ್ಡಾಯವಾಗಿ ಮುಜರಾಯಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಆಗ ಯಾತ್ರಿಗಳೊಂದಿಗೆ ಸಂಪರ್ಕ ಸುಲಭವಾಗುತ್ತದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.