ADVERTISEMENT

ರೇಣುಕಾಚಾರ್ಯಗೆ ₹ 500 ದಂಡ ವಿಧಿಸಿದ ಕೋರ್ಟ್‌

ಪೊಲೀಸ್ ಕಸ್ಟಡಿಯಲ್ಲಿ ದಿನ ಕಳೆದ ಎಂ.ಪಿ.ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 31 ಮೇ 2019, 20:16 IST
Last Updated 31 ಮೇ 2019, 20:16 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ಬೆಂಗಳೂರು: ಚುನಾವಣಾ ನೀತಿ ಸಂಹಿತೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಗೈರು ಹಾಜರಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಜನಪ್ರತಿನಿಧಿಗಳ ಕೋರ್ಟ್‌ ನಾಲ್ಕು ಗಂಟೆಗೂ ಹೆಚ್ಚು ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ನಂತರ ₹ 500 ದಂಡ ವಿಧಿಸಿ ಬಿಡುಗಡೆ ಮಾಡಿದೆ.

ವಾರಂಟ್‌ ರಿಕಾಲ್‌ ಮಾಡಿಸಿಕೊಳ್ಳಲು ರೇಣುಕಾಚಾರ್ಯ ಶುಕ್ರವಾರ ಇಲ್ಲಿನ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರಾದರು.

ಬೆಳಿಗ್ಗೆ 11 ಗಂಟೆ ವೇಳೆಗೆ ಪ್ರಕರಣದ ವಿಚಾರಣೆಗೆ ಕೂಗಿದಾಗ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಅವರ ಮುಂದೆ ರೇಣುಕಾಚಾರ್ಯ ಹಾಜರಾದರು. ಈ ವೇಳೆ ನ್ಯಾಯಾಧೀಶರು ಶಾಸಕರ ನಡೆಯನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ‘ಹೀಗೆ ಬೇಕಾಬಿಟ್ಟಿ ನಡೆದುಕೊಳ್ಳಬಾರದು. ನೀವೆಲ್ಲಾ ಸಾರ್ವಜನಿಕರಿಗೆ ಮಾದರಿಯಾಗಿರಬೇಕು’ ಎಂದು ಕಿವಿಮಾತು ಹೇಳಿದರು. ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮಧ್ಯಾಹ್ನದ ಕಲಾಪದಲ್ಲಿ 4 ಗಂಟೆಯ ನಂತರ ಬಿಡುಗಡೆಗೆ ಆದೇಶಿಸಿದರು.

ADVERTISEMENT

ವಿಚಾರಣೆಯನ್ನು ಜೂನ್‌ 13ಕ್ಕೆ ಮುಂದೂಡಲಾಗಿದೆ.

ಫೋನ್‌ ವಿಚಾರಣೆಗೆ ರೇಣುಕಾಚಾರ್ಯ ಅವರಿಗೆ ಜಾಮೀನು ನೀಡಲು ಬಂದಿದ್ದ ಹರಿಹರ ಕ್ಷೇತ್ರದ ಮಾಜಿ ಶಾಸಕ ಬಿ.ಪಿ.ಹರೀಶ್‌ ಅವರ ಮೊಬೈಲ್‌ ರಿಂಗಣಿಸಿತು. ಕೂಡಲೇ ನ್ಯಾಯಾಧೀಶರು ಕೋರ್ಟ್ ಅಧಿಕಾರಿಗಳಿಗೆ ಫೋನ್‌ ವಶಪಡಿಸಿಕೊಳ್ಳಲು ಆದೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.