ADVERTISEMENT

‘ರೇಣುಕಾಚಾರ್ಯ ಜಯಂತಿ’ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 19:50 IST
Last Updated 21 ಜುಲೈ 2019, 19:50 IST
ಧರ್ಮ ಜಾಗೃತಿ ಸಮ್ಮೇಳನ ಅಂಗವಾಗಿ ಮೇಖ್ರಿ ವೃತ್ತದಿಂದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಬೆಳ್ಳಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು –ಪ್ರಜಾವಾಣಿ ಚಿತ್ರ
ಧರ್ಮ ಜಾಗೃತಿ ಸಮ್ಮೇಳನ ಅಂಗವಾಗಿ ಮೇಖ್ರಿ ವೃತ್ತದಿಂದ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಬೆಳ್ಳಿ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರ್ಕಾರದರಜೆರಹಿತ ‘ಜಗದ್ಗುರು ರೇಣುಕಾಚಾರ್ಯ ಜಯಂತಿ’ ಯನ್ನುಅಧಿಕೃತವಾಗಿ ಘೋಷಿಸಬೇಕು. ಸಮುದಾಯದ ಅಭಿವೃದ್ಧಿಗಾಗಿ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಬೇಕು ಎಂದು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದರು.

ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವ’ ಹಾಗೂ ‘ಧರ್ಮ ಜಾಗೃತಿ ಸಮ್ಮೇಳನ’ದಲ್ಲಿ ಅವರು ಮಾತನಾಡಿದರು. ‌

‘ವೀರಶೈವ ಲಿಂಗಾಯತ ಧರ್ಮ ಒಡೆಯಲು ರಾಜಕೀಯ ನಾಯಕರು ದೊಡ್ಡಮಟ್ಟದ ಹುನ್ನಾರ ನಡೆಸಿ ದೂಳೀಪಟವಾದರು. ಧರ್ಮ ಬೇರ್ಪಡಿಸುವ ವಿಚಾರ ಇನ್ನೂ ಕೆಲವರ ಮನಸ್ಸಿನಲ್ಲಿದ್ದು, ಕೆಲವೇ ದಿನಗಳಲ್ಲಿ ಭಸ್ಮವಾಗಲಿದೆ’ ಎಂದರು.

ADVERTISEMENT

ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ‘ರಾಜ್ಯದಲ್ಲಿ 500 ಎಕರೆಯಲ್ಲಿ ಪಂಚಾಚಾರ್ಯರ ಪ್ರತಿಮೆಗಳನ್ನು ಸ್ಥಾಪಿಸೋಣ. ರೇಣುಕಾಚಾರ್ಯರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸುವ ಬಗ್ಗೆ ಮುಂಬರುವ ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಪ್ರಶಾಂತ್‌ ಕಲ್ಲೂರ್‌, ‘ಅಡ್ಡ ಪಲ್ಲಕ್ಕಿ ಉತ್ಸವ ಬೇಡ ಎಂದು ರಾಜಕೀಯ ನಾಯಕರು ಬೆದರಿಕೆ ಹಾಕಿದ್ದರು. ಆದರೆ, ಅದಕ್ಕೆ ನಾವು ಹೆದರಲಿಲ್ಲ. ಸಮುದಾಯದ ಯುವಕರು ಸಶಕ್ತರಾಗಿದ್ದೇವೆ’ ಎಂದರು.

ಯಡಿಯೂರಪ್ಪ ಮುಂದಿನ ಸಿಎಂ: ರೆಡ್ಡಿ

‘ವೀರಶೈವ– ಲಿಂಗಾಯತ ಒಂದೇ ನಾಣ್ಯದ ಎರಡು ಮುಖಗಳು. ಧರ್ಮ ಒಡೆದವರು ಭಸ್ಮವಾಗುತ್ತಾರೆ ಎಂದು ಈ ಹಿಂದೆ ಹೇಳಿದ್ದೆ. ಅದರಂತೆ, ಧರ್ಮಕ್ಕೆ ವಿರುದ್ಧವಾಗಿ ನಡೆದು ಹಿಂದಿನ ಸರ್ಕಾರ ಪತನವಾಯಿತು. ಈಗಿನ ಸರ್ಕಾರ 2–3 ದಿನಗಳಲ್ಲಿ ಸಂಪೂರ್ಣ ಭಸ್ಮವಾಗಲಿದೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ’ ಎಂದು ಜನಾರ್ದನ ರೆಡ್ಡಿ ಹೇಳಿದರು.

ಮೈತ್ರಿಗೆ ಸೋಲು ಖಚಿತ: ಡಿವಿಎಸ್

ಅಡ್ಡಪಲ್ಲಕ್ಕಿ ಉತ್ಸವಕ್ಕೆ ಕೇಂದ್ರಸಚಿವ ಡಿ.ವಿ.ಸದಾನಂದ ಗೌಡ ಚಾಲನೆ ನೀಡಿದರು. ಬಳಿಕ ಮಾತನಾಡಿ, ‘ರಾಜ್ಯ ರಾಜಕಾರಣ ಗೊಂದಲಗಳ ಗೂಡಾಗಿದೆ. ಇದಕ್ಕೆ ಅಂತ್ಯ ಕಾಣಬೇಕಾದರೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಸೋಮವಾರ ವಿಶ್ವಾಸ ಮತಯಾಚನೆ ವೇಳೆ ಮೈತ್ರಿ ಸರ್ಕಾರಕ್ಕೆ ಸೋಲು ಖಚಿತ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.