ADVERTISEMENT

ಸದಾಶಿವ ಆಯೋಗದ ವರದಿ ಬಹಿರಂಗಪಡಿಸಿ: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 19:30 IST
Last Updated 22 ಸೆಪ್ಟೆಂಬರ್ 2020, 19:30 IST

ಬೆಂಗಳೂರು: 'ಪರಿಶಿಷ್ಟ ಜಾತಿಗಳ ಏಕತೆಯ ದೃಷ್ಟಿಯಿಂದ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಹಿರಂಗ ಚರ್ಚೆಗಾಗಿ ಬಿಡುಗಡೆ ಮಾಡಬೇಕು' ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವತಿಯಿಂದ 'ಸುಪ್ರೀಂಕೋರ್ಟ್ ತೀರ್ಪು ಮತ್ತು ಮೀಸಲಾತಿ, ಕೆನೆಪದರ ಮತ್ತು ವರ್ಗೀಕರಣ' ಕುರಿತು ನಡೆದ ಚಿಂತನಾ-ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

'ಕೋಟ್ಯಂತರ ಹಣ ವ್ಯಯ ಮಾಡಿ ಆಯೋಗ ರಚಿಸಲಾಗಿತ್ತು. ಆದರೆ, ವರದಿಯನ್ನು ಬಚ್ಚಿಡಲಾಗಿದೆ. ಬಾಧಿತ ಸಮುದಾಯಗಳಿಗೆ ವರದಿಯ ದೃಢೀಕೃತ ಪ್ರತಿ ನೀಡಬೇಕು. ಆಕ್ಷೇಪಣೆ, ತಕರಾರು ಸಲ್ಲಿಸಲು ಸಮುದಾಯಗಳಿಗೆ ಅವಕಾಶ ನೀಡಬೇಕು' ಎಂದರು.

ADVERTISEMENT

'ವಿಧಾನಸಭೆಯಲ್ಲಿ ವರದಿಯ ವಿಸ್ತೃತವಾದ ಚರ್ಚೆಯ ಅಗತ್ಯವಿದೆ. ಆಯೋಗದ ಉದ್ದೇಶ, ಕಾರ್ಯವಿಧಾನ ಮತ್ತು ಶಿಫಾರಸುಗಳ ಕುರಿತು ಗೊಂದಲಗಳಿವೆ. ಈ ಗುಮಾನಿ ಹಾಗೂ ಆತಂಕ ದೂರ ಮಾಡಲು ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸಬೇಕು' ಎಂದು ಒತ್ತಾಯಿಸಿದರು.

'ಎಡ-ಬಲ, ಅಲೆಮಾರಿ-ಆದಿವಾಸಿ ಗುರುತುಗಳನ್ನು ದಾಟಿ ಪರಿಶಿಷ್ಟರು ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಪರಿಶಿಷ್ಟರಲ್ಲಿ ಕೆನೆಪದರ ಜಾರಿಗೊಳಿಸಬಹುದು ಎಂಬ ಸುಪ್ರೀಂಕೋರ್ಟ್‍ನ ಅಭಿಪ್ರಾಯ ನ್ಯಾಯ ಸಮ್ಮತವಲ್ಲ. ಶತಮಾನಗಳಿಂದ ತಾರತಮ್ಯಕ್ಕೆ ಒಳಗಾಗಿದ್ದವರನ್ನು ಪರಿಶಿಷ್ಟ ಪಟ್ಟಿಯಿಂದ ಹೊರಹಾಕುವ ದುರುದ್ದೇಶ ಇದರಲ್ಲಿರುವ ಅನುಮಾನವಿದೆ. ಈ ಬಗ್ಗೆಯೂ ಚರ್ಚೆ ನಡೆಯಬೇಕು' ಎಂದರು.

ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಒಕ್ಕೂಟದ ಡಾ.ರವಿ ಮಾಕಳಿ, ರಾಘವೇಂದ್ರ ನಾಯಕ್, ಎನ್.ಅನಂತ ನಾಯಕ್, ಬಾಲರಾಜ್ ನಾಯಕ್, ಆದರ್ಶ ಯಲ್ಲಪ್ಪ, ಕಿರಣ್ ಕೊತ್ತಗೆರೆ, ಸುಭಾಷ್ ರಾಠೋಡ್, ಅಶೋಕ ಲಿಂಬಾವಳಿ, ಸುಗುಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.