ADVERTISEMENT

ಬೆಂಗಳೂರು ಗ್ರಾಮಾಂತರ: ಕಂದಾಯ ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 9:51 IST
Last Updated 20 ಫೆಬ್ರುವರಿ 2021, 9:51 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ ಅವರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಇದ್ದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆಗೆ ರಾಜ್ಯ ಮಟ್ಟದ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ ಅವರನ್ನು ಎತ್ತಿನ ಗಾಡಿಯಲ್ಲಿ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಶಾಸಕ ಟಿ.ವೆಂಕಟರಮಣಯ್ಯ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ ಇದ್ದರು.   

ಬೆಂಗಳೂರು: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್.‌ಅಶೋಕ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಜಿ.‌ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆಯಿಂದ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ.

ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿಳಿದ ಸಚಿವರನ್ನು ಎತ್ತಿನ ಗಾಡಿಯಲ್ಲಿ ಗ್ರಾಮ‌ದೇವತೆ ಮಾರಮ್ಮನ ದೇವಸ್ಥಾನಕ್ಕೆ ಕರೆತರಲಾಯಿತು. ದೇವಿಯ ದರ್ಶನ ಪಡೆದ ಸಚಿವರು, ದೇವಸ್ಥಾನದ ಮುಂಭಾಗದಲ್ಲೇ ಗ್ರಾಮಸ್ಥರ ಅಹವಾಲು ಆಲಿಸುತ್ತಿದ್ದಾರೆ.

ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಹಲವರು ಸಚಿವರ ಜತೆಗಿದ್ದಾರೆ. ಕಂದಾಯ ಸಚಿವರು ಶನಿವಾರ ಜಿ. ಹೊಸಹಳ್ಳಿ ಗ್ರಾಮದಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ADVERTISEMENT

ಲಕ್ಷ್ಮೀನರಸಿಂಹ ದೇವಸ್ಥಾನ, ಮಾರಮ್ಮ ದೇವಸ್ಥಾನದಲ್ಲಿ ದರ್ಶನ ಪಡೆದ ಬಳಿಕ ಕಂದಾಯ ಸಚಿವರು ಜಿ. ಹೊಸಹಳ್ಳಿ ಪರಿಶಿಷ್ಟ ಜಾತಿ ಕಾಲೋನಿಗೆ ಭೇಟಿನೀಡಿದ್ದಾರೆ. ಅಲ್ಲಿಯೇ ಜನರ ಅಹವಾಲು ಆಲಿಸುತ್ತಿದ್ದಾರೆ‌

'ಕಂದಾಯ ಇಲಾಖೆಯ ಕೆಲಸಗಳಿಗಾಗಿ ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ತಪ್ಪಬೇಕು. ಇದಕ್ಕಾಗಿ ಸರ್ಕಾರವೇ ಜನರ ಬಳಿಗೆ ಹೋಗಬೇಕು.‌ ಈ ಉದ್ದೇಶದಿಂದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎಂಬ ಕಾರ್ಯಕ್ರಮ ಆರಂಭಿಸಿದ್ದೇನೆ. ನಿರಂತರವಾಗಿ ಕಾರ್ಯಕ್ರಮ ನಡೆಯಲಿದೆ' ಎಂದರು.

ಪರಿಶಿಷ್ಟ ಜಾತಿಯ ಜನರು ವಾಸಿಸುವ ಪ್ರದೇಶಗಳಲ್ಲಿ ಅಭಿವೃದ್ಧಿ ಆಗಬೇಕು. ಎಲ್ಲ ಜಾತಿ, ಧರ್ಮಗಳ ಜನರು ಒಟ್ಟಾಗಿ ದುಡಿದರೆ ದೇಶ ಅಭಿವೃದ್ಧಿಯಾಗುತ್ತದೆ‌. ಒಬ್ಬರು ದುಡಿದರೆ ಆಗುವುದಿಲ್ಲ ಎಂದರು.

ಕಂದಾಯ ಇಲಾಖೆ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು ತಮ್ಮ ಮುಖ್ಯ ಉದ್ಧೇಶ. ಜನರು ನೇರವಾಗಿ ಸರ್ಕಾರದ ಸೇವೆ ಪಡೆಯಲು ಅವಕಾಶ ಸಿಗಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.