ADVERTISEMENT

ರಸ್ತೆ ಅಪಘಾತ | ಚಾಲಕರಿಗೆ ವಿಶೇಷ ತರಬೇತಿ: ಸಾವಿನ ಸಂಖ್ಯೆ ಕೊಂಚ ಇಳಿಕೆ

ಬ್ಲಾಕ್ ಸ್ಪಾಟ್ ಗುರುತು

ಕೆ.ಎಸ್.ಸುನಿಲ್
Published 4 ಆಗಸ್ಟ್ 2025, 23:19 IST
Last Updated 4 ಆಗಸ್ಟ್ 2025, 23:19 IST
ಪೀಣ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದ ದೃಶ್ಯ. 
ಪೀಣ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದ ದೃಶ್ಯ.    

ಬೆಂಗಳೂರು: ನಗರದಲ್ಲಿ ಬ್ಲಾಕ್‌ ಸ್ಪಾಟ್‌ಗಳ (ಹೆಚ್ಚು ಅಪಘಾತ ಸಂಭವಿಸುವ ಸ್ಥಳ) ಗುರುತು, ಬಿಎಂಟಿಸಿ ಚಾಲಕರಿಗೆ ವಿಶೇಷ ತರಬೇತಿ ಸೇರಿ ಹಲವು ಕ್ರಮಗಳನ್ನು ಕೈಗೊಂಡ ಪರಿಣಾಮ ರಸ್ತೆ ಅಪಘಾತ ಪ್ರಕರಣಗಳು ಕಡಿಮೆ ಆಗುತ್ತಿವೆ. ಜತೆಗೆ ಗಾಯಗೊಂಡವರು ಹಾಗೂ ಮೃತಪಟ್ಟವರ ಸಂಖ್ಯೆಯಲ್ಲಿಯೂ ಕೊಂಚ ಇಳಿಕೆಯಾಗಿದೆ.

ಅಂಕಿಅಂಶಗಳ ಪ್ರಕಾರ ಕೆಲ ವರ್ಷಗಳಿಂದ ನಗರದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ನಗರದಲ್ಲಿ 25,72,486 ಕಾರುಗಳಿವೆ. ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ನಡುವಿನ ಅನುಪಾತ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇದು ಸಂಚಾರಕ್ಕೆ ತೊಡಕಾಗಿದೆ.

ನಗರದಲ್ಲಿ ನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ವಾಹನಗಳ ಸಂಖ್ಯೆಯು 1.25 ಕೋಟಿಯ ಗಡಿ ದಾಟಿದೆ. ಈ ಪೈಕಿ ಶೇಕಡ 72ರಷ್ಟು ದ್ವಿಚಕ್ರ ವಾಹನಗಳಿವೆ. ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರತಿದಿನ ಸಾವಿರಾರು ಪ್ರಕರಣಗಳು ದಾಖಲಾಗುತ್ತಿವೆ.

ADVERTISEMENT

2022ರಲ್ಲಿ ಸಂಭವಿಸಿದ 3,822 ರಸ್ತೆ ಅಪಘಾತಗಳಲ್ಲಿ 772 ಜನರು ಮೃತಪಟ್ಟಿದ್ದರು. 2023ರಲ್ಲಿ 4,974 ಅಪಘಾತಗಳಾಗಿ 910 ಮಂದಿ ಸಾವಿಗೀಡಾಗಿದ್ದರು. 2024ರಲ್ಲಿ 4,351 ಅಪಘಾತಗಳಲ್ಲಿ 802 ಮಂದಿ ಮೃತಪಟ್ಟಿದ್ದರೆ, ಪ್ರಸ್ತಕ ವರ್ಷ ಜೂನ್‌ವರೆಗೆ ಸಂಭವಿಸಿದ ಅಪಘಾತಗಳಲ್ಲಿ 306 ಮಂದಿ ಅಸುನೀಗಿದ್ದಾರೆ.  

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನೈಸ್ ರಸ್ತೆಯಲ್ಲಿ ಅತಿ ವೇಗದ ಸಂಚಾರಕ್ಕೆ ಕಡಿವಾಣ ಹಾಕಿದ ಪರಿಣಾಮ ಅಪಘಾತಗಳ ಪ್ರಮಾಣ ಕಡಿಮೆಯಾಗುತ್ತಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಪರೀತ ವಾಹನ ದಟ್ಟಣೆ ಹಾಗೂ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದವು.

2023ರಲ್ಲಿ ಈ ರಸ್ತೆಯಲ್ಲಿ 322 ಅಪಘಾತಗಳು ಸಂಭವಿಸಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದರು.

‘ಅಪಘಾತಗಳಿಗೆ ಅತಿ ವೇಗವೇ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ‌ಹಾಗಾಗಿ, ಅಪಘಾತಗಳನ್ನು ನಿಯಂತ್ರಿಸುವ ಉದ್ದೇಶದಿಂದ ವಾಹನಗಳ ಗರಿಷ್ಠ ವೇಗವನ್ನು 80 ಕಿ.ಮೀ.ಗೆ ನಿಗದಿಪಡಿಸಲಾಗಿದೆ. ವೇಗಮಿತಿ ನಿಗದಿ ಬಳಿಕ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದ್ದಾರೆ.

‘ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಕೆ, ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತು ಮಾಡಿ, ಕ್ರಮ ಕೈಗೊಳ್ಳಲಾಗಿದೆ. ರಸ್ತೆ ನಿರ್ವಹಣೆ ಮಾಡುವ ಬಿಬಿಎಂಪಿ, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜತೆಗೆ ಒಟ್ಟಿಗೆ ಕೆಲಸ ಮಾಡಿದ್ದರಿಂದ ಅಪಘಾತಗಳ ಸಂಖ್ಯೆ ಇಳಿಮುಖವಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಅಪಘಾತ ನಿಯಂತ್ರಿಸಲು ಹಲವು ಕ್ರಮಗಳನ್ನು ಕೈಗೊಂಡರೂ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗುತ್ತಲೇ ಇವೆ. ಅತಿ ವೇಗದ ಸಂಚಾರದಿಂದಲೇ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಸಂಚಾರ ನಿಯಮ ಕುರಿತು ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಹೇಳಿದರು.

ಅವಘಡಗಳಿಗೆ ಕಾರಣ ಅಧ್ಯಯನ ಮಾಡಿ ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿದೆ. ದಂಡ ವಿಧಿಸುವುದು ಇಲಾಖೆ ಉದ್ದೇಶವಲ್ಲ ಸಾರ್ವಜನಿಕರು ಸಂಚಾರ ನಿಯಮ ಪಾಲಿಸಬೇಕು.
ಕಾರ್ತಿಕ್ ರೆಡ್ಡಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್

ಚಾಲಕರಿಗೆ ವಿಶೇಷ ತರಬೇತಿ

ಬಿಎಂಟಿಸಿ ಬಸ್‌ಗಳಿಂದ ಸಂಭವಿಸುತ್ತಿರುವ ಅಪಘಾತಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ನಗರ ಸಂಚಾರ ಪೊಲೀಸ್‌ ವಿಭಾಗದ ವತಿಯಿಂದ ಚಾಲಕರು ಹಾಗೂ ನಿರ್ವಾಹಕರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ವರ್ಷದಿಂದ ತರಬೇತಿ ನೀಡುತ್ತಿದ್ದು ಈವರೆಗೆ 10 ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ. 12 ಸಾವಿರ ಸಿಬ್ಬಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.