ADVERTISEMENT

ರಸ್ತೆ ಯೋಜನೆಯಿಂದ ಪಕ್ಷಿಧಾಮಕ್ಕೆ ಹಾನಿ: ಹೈಕೋರ್ಟ್‌ ನೋಟಿಸ್

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 3:45 IST
Last Updated 24 ಸೆಪ್ಟೆಂಬರ್ 2020, 3:45 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು:ಮೈಸೂರು -ಮಡಿಕೇರಿಮಧ್ಯದ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಯು ರಂಗನತಿಟ್ಟು ಪಕ್ಷಿಧಾಮ ಮತ್ತು ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಧರಿಸಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್‌ ನೋಟಿಸ್ ನೀಡಿದೆ.

ನಿವೃತ್ತ ಅಧಿಕಾರಿ ಎಚ್‌.ಟಿ. ಚಂದ್ರಶೇಖರ್ ಮತ್ತು ಕೊಡಗು ವನ್ಯಜೀವಿ ಸೊಸೈಟಿಯ ಈ ಹಿಂದಿನ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಈ ಯೋಜನೆ ಅನುಷ್ಠಾನದಿಂದ ಸೂಕ್ಷ್ಮ ಪರಿಸರ ವಿಜ್ಞಾನದ ಮೇಲೆ ಆಗಲಿರುವ ಪರಿಣಾಮದ ಬಗ್ಗೆ ಅಧಿಕಾರಿಗಳು ಆಲೋಚನೆಯನ್ನೇ ನಡೆಸಿಲ್ಲ ಮತ್ತು ಸಂಬಂಧಪಟ್ಟ ಪ್ರಾಧಿಕಾರದಿಂದ ಸಲಹೆಯನ್ನೂ ಪಡೆದಿಲ್ಲ’ ಎಂದು ಅರ್ಜಿದಾರರು ದೂರಿದ್ದಾರೆ.

ADVERTISEMENT

‘ಉದ್ದೇಶಿತ ಹೆದ್ದಾರಿಯುಪಕ್ಷಿಧಾಮದ ಸಮೀಪದಲ್ಲೇ ಹಾದು ಹೋಗಲಿದೆ. ಹೆದ್ದಾರಿ ಪ್ರಾಧಿಕಾರ ಖಾಸಗಿ ಸರ್ವೆ ಏಜೆನ್ಸಿ ಮೇಲೆ ಅವಲಂಭಿತವಾಗಿದೆ. ಈ ಸರ್ವೆ ವರದಿಗೂ ಅರಣ್ಯ ಇಲಾಖೆ ನಡೆಸಿರುವ ಸ್ಥಳ ಪರಿಶೀಲನಾ ವರದಿಗಳಿಗೂ ವ್ಯತ್ಯಾಸ ಇವೆ’ ಎಂದು ಅರ್ಜಿದಾರರು ತಿಳಿಸಿದ್ದಾರೆ.

‘ಯೋಜನೆ ಇನ್ನೂ ಆರಂಭವಾಗಿಲ್ಲ, ಕೇವಲ ಸರ್ವೆಯನ್ನಷ್ಟೆ ನಡೆಸಲಾಗಿದೆ’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ‘ಈಗಾಗಲೇ ಕಾಮಗಾರಿ ಆರಂಭವಾಗಿದೆ. ಯೋಜನೆ ಮುಂದುವರಿಸಿದರೆ ಪರಿಸರ ವಿಜ್ಞಾನದ ಮೇಲೆ ಪರಿಣಾಮ ಬೀರಲಿದೆ’ ಎಂದು ಅರ್ಜಿದಾರರ ಪರ ವಕೀಲ ಬಿ.ಆರ್. ದೀಪಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.