ADVERTISEMENT

ಬೆಳ್ಳಂದೂರು ದರೋಡೆ: ಸಹಚರರಿಗೆ ಜಾಮೀನು ಕೊಡಿಸಲು ಕೃತ್ಯ

ವೃದ್ಧರಿದ್ದ ಮನೆಗೆ ನುಗ್ಗಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2021, 16:28 IST
Last Updated 11 ಸೆಪ್ಟೆಂಬರ್ 2021, 16:28 IST

ಬೆಂಗಳೂರು: ಬೆಳ್ಳಂದೂರಿನ 8ನೇ ಅಡ್ಡರಸ್ತೆಯ ಬಳಿ ವೃದ್ಧರಿದ್ದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಆರೋಪದಡಿ ತೇಜಸ್ ಹಾಗೂ ಆತನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.

‘ಹಾಸನದ ತೇಜಸ್ ಹಾಗೂ ಸಹಚಹರರರು, ಆ. 20ರಂದು ಮನೆಗೆ ನುಗ್ಗಿದ್ದರು. ವೃದ್ಧ ವ್ಯಕ್ತಿಯ ಕೈ–ಕಾಲುಗಳನ್ನು ಕಟ್ಟಿಹಾಕಿ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪುರಾವೆಗಳನ್ನು ಸಂಗ್ರಹಿಸಿ ಹಾಸನದಲ್ಲಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

'ತೇಜಸ್ ಜೊತೆಯಲ್ಲಿ ನಿತಿನ್, ಹೃತಿಕ್, ಅರುಣ್, ರಾಜವರ್ಧನ್ ಹಾಗೂ ಮಹದೇವ್ ಎಂಬುವರನ್ನು ಬಂಧಿಸಲಾಗಿದೆ. ಅವರಿಂದ ₹ 40 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

‘ಹಾಸನದಲ್ಲೂ ದರೋಡೆ ಸೇರಿ ಹಲವು ಕೃತ್ಯಗಳಲ್ಲಿ ತೇಜಸ್‌ ಹಾಗೂ ಸಹಚರರು ಭಾಗಿಯಾಗಿದ್ದರು. ಅವರನ್ನು ಬಂಧಿಸಿದ್ದ ಹಾಸನ ಪೊಲೀಸರು ಜೈಲಿಗಟ್ಟಿದ್ದರು. ತೇಜಸ್ ಮಾತ್ರ ಇತ್ತೀಚೆಗಷ್ಟೇ ಜಾಮೀನು ಮೇಲೆ ಹೊರಗೆ ಬಂದಿದ್ದ. ತನ್ನ ಸಹಚರರಿಗೂ ಜಾಮೀನು ಕೊಡಿಸಲು ಮುಂದಾಗಿದ್ದ ತೇಜಸ್, ಅದಕ್ಕಾಗಿ ಹಣ ಹೊಂದಿಸಲು ದರೋಡೆಗೆ ಸಂಚು ರೂಪಿಸಿದ್ದ’ ಎಂದೂ ಮೂಲಗಳು ಹೇಳಿವೆ.

‘ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ವೃದ್ಧರಿರುವ ಮನೆಗಳನ್ನು ಗುರುತಿಸಿದ್ದರು. ಬೆಳ್ಳಂದೂರಿನ ಮನೆಗೆ ನುಗ್ಗಿ ವೃದ್ಧರ ಕೈ–ಕಾಲು ಕಟ್ಟಿಹಾಕಿ ₹ 1.40 ಲಕ್ಷ ನಗದು ಹಾಗೂ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.