ADVERTISEMENT

ಆರ್‌.ಆರ್‌.ನಗರ: ಗೆಲುವಿಗೆ ಆರ್. ಅಶೋಕ ಕಸರತ್ತು

3 ದಿನಗಳಿಂದ ಕಾರ್ಯಕರ್ತರ ಸರಣಿ ಸಭೆ l 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲು ತಯಾರಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 20:14 IST
Last Updated 9 ಅಕ್ಟೋಬರ್ 2020, 20:14 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ಆರ್‌.ಆರ್‌.ನಗರ ಕ್ಷೇತ್ರದ ಉಪಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗುತ್ತಿದ್ದು, ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊತ್ತಿರುವ ಕಂದಾಯ ಸಚಿವ ಆರ್‌.ಅಶೋಕ ಅವರು ಎರಡು ದಿನಗಳಿಂದ ಪಕ್ಷದ ಪ್ರಮುಖ ಕಾರ್ಯಕರ್ತರ ಸರಣಿ ಸಭೆಗಳನ್ನು ನಡೆಸಿ ಕಾರ್ಯತಂತ್ರಗಳನ್ನು ರೂಪಿಸಲಾರಂಭಿಸಿದ್ದಾರೆ.

ಗುರುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, ಶುಕ್ರವಾರ ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ
ಸಭೆಗಳನ್ನು ನಡೆಸಿದರು. ಶನಿವಾರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.

‘ಈ ಕ್ಷೇತ್ರದಲ್ಲಿ ಹಿಂದೆ ಮೂರು ಬಾರಿ ನಾನು ಗೆದ್ದಿದ್ದೆ. ಇಲ್ಲಿನ ನಾಡಿ ಮಿಡಿತ ಚೆನ್ನಾಗಿ ಗೊತ್ತಿದ್ದು, 40 ಸಾವಿರದಿಂದ 50 ಸಾವಿರ ಮತಗಳ ಅಂತರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ತಯಾರಿ ಮಾಡಿಕೊಂಡಿದ್ದೇವೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್‌ ಅವರ ಪಟ್ಟುಗಳು ಗೊತ್ತಿವೆ. ಇಲ್ಲಿ ಗೆಲುವು ಸಾಧಿಸುವುದು ನಮಗೆ ಕಷ್ಟವಾಗುವುದಿಲ್ಲ’ ಎಂದು ಅವರು ಹೇಳಿದರು.

ADVERTISEMENT

‘ಈ ಚುನಾವಣೆಯಲ್ಲಿ ಸರ್ಕಾರದ ಸಾಧನೆಗಳನ್ನೇ ಮುಂದಿಟ್ಟುಕೊಂಡು ಮತವನ್ನು ಕೇಳುತ್ತೇವೆ. ಮುನಿರತ್ನ ಅವರು ಬಿಜೆಪಿ ಸೇರಿರುವುದರಿಂದ ಪಕ್ಷದಲ್ಲಿ ಯಾವುದೇ ಗೊಂದಲ ಆಗಿಲ್ಲ. ಒಂದು ವೇಳೆ ಏನೇ ಸಮಸ್ಯೆ ಇದ್ದರೂ ಅದನ್ನು ಸರಿಪಡಿಸಿ ಕಾರ್ಯಕರ್ತರನ್ನು ಜತೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು’ ಎಂದು ಅಶೋಕ ತಿಳಿಸಿದರು.

‘ಮನೆ– ಮನೆಗಳನ್ನು ಸಂಪರ್ಕಿಸಿ ರಾಜ್ಯ ಸರ್ಕಾರದ ಸಾಧನೆಗಳನ್ನು ವಿವರಿಸಬೇಕು. ಮುಂದೆ ಕ್ಷೇತ್ರದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆಯೂ ಹೇಳಬೇಕು. ಇನ್ನು 25 ದಿನಗಳು ಉಳಿದಿವೆ. ಗೆಲ್ಲಲೇಬೇಕು ಎಂಬ ಗುರಿ ಇಟ್ಟುಕೊಂಡು ಶ್ರಮಿಸೋಣ’ ಎಂದು ಅವರು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.