ಬೆಂಗಳೂರು: ‘ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್, ದಲಿತರನ್ನು ಗುಲಾಮರನ್ನಾಗಿಸುವ ಹುನ್ನಾರ ನಡೆಸುತ್ತಿವೆ’ ಎಂದು ಕನ್ನಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.
ಭೀಮ ಸಂಘಟನೆಗಳ ಮಹಾ ಒಕ್ಕೂಟ (ಬಿಎಸ್‌ಎಂಒ) ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಹಾಗೂ ಬಿಎಸ್‌ಎಂಒದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳು ದಲಿತರನ್ನು ದಮನಿಸುವ ಕೆಲಸ ಮಾಡುತ್ತಿವೆ. ಈಗಾಗಲೇ ಮುಸ್ಲಿಂ ಸಮುದಾಯವನ್ನು ಬಹಿರಂಗವಾಗಿ ದ್ವೇಷಿಸುತ್ತಿವೆ. ಇದನ್ನು ನಾವು ಖಂಡಿಸಬೇಕು’ ಎಂದು ಹೇಳಿದರು.
‘ಅಸ್ಪೃಶ್ಯತೆ, ಜಾತಿಯತೆ ವಿರುದ್ಧ ಡಾ.ಬಿ.ಆರ್. ಅಂಬೇಡ್ಕರ್ ಹೋರಾಟ ನಡೆಸಿದರು. ಸಂವಿಧಾನ ರಚನೆ ಮಾಡುವುದರ ಮೂಲಕ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡಿದ್ದಾರೆ’ ಎಂದು ಹೇಳಿದರು.
‘ವಿಶ್ವದ ಬೇರೆ–ಬೇರೆ ದೇಶಗಳಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ವಿರೂಪಗೊಳಿಸಲಾಗುತ್ತಿದೆ’ ಎಂದರು.
‘ಸಂವಿಧಾನ ಹಾಗೂ ಮೀಸಲಾತಿ ಸೌಲಭ್ಯವನ್ನು ರದ್ದುಗೊಳಿಸುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡಬಾರದು’ ಎಂದು ಹೇಳಿದರು.
ಬಿಎಸ್‌ಎಂಒ ಅಧ್ಯಕ್ಷ ಕೆ. ಮರಿಯಪ‍್ಪ, ಹೆಬ್ಬಾಳ ವೆಂಕಟೇಶ್, ಜಾನಪದ ಗಾಯಕ ಬಾನಂದೂರು ಕೆಂಪಯ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.