ADVERTISEMENT

ಆರ್‌ಟಿಇ ಪಟ್ಟಿಯಲ್ಲಿ ಸ್ಥಗಿತಗೊಂಡ ಶಾಲೆ ಹೆಸರು!

ಶಿಕ್ಷಣ ಇಲಾಖೆ ಎಡವಟ್ಟು– ಸೌಲಭ್ಯ ವಂಚಿತ ವಿದ್ಯಾರ್ಥಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 19:59 IST
Last Updated 11 ಮೇ 2019, 19:59 IST
   

ಬೆಂಗಳೂರು: ಮಗನನ್ನು ಉತ್ತಮ ಶಾಲೆಗೆ ಸೇರಿಸಬೇಕೆಂಬ ಆಶಯದಿಂದ ಪೋಷಕರು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಶಿಕ್ಷಣ ಇಲಾಖೆ ಶಾಲೆಯೊಂದರ ಹೆಸರು ಸೂಚಿಸಿತ್ತು. ಆದರೆ, ಆ ಶಾಲೆಯ ವಿಳಾಸ ಪೋಷಕರಿಗೆ ಇನ್ನೂ ಸಿಕ್ಕಿಲ್ಲ. ಕಾರಣ, ಆ ಶಾಲೆ ಈ ವರ್ಷ ಅಸ್ತಿತ್ವದಲ್ಲೇ ಇಲ್ಲ.

ಬಾಣಸವಾಡಿ ಸಮೀಪದ ಕಮ್ಮನಹಳ್ಳಿಯ ಪೋಷಕರೊಬ್ಬರು ಮಗನನ್ನು ಶಾಲೆಗೆ ದಾಖಲಿಸಲು ಆರ್‌ಟಿಇ ಅರ್ಜಿ ಸಲ್ಲಿಸಿದ್ದರು. ಅವರಿಗೆ ಕಮ್ಮನಹಳ್ಳಿಯ ಮಾರುತಿ ವಿದ್ಯಾಲಯ ಶಾಲೆಯ ಸೀಟು ಲಭಿಸಿತ್ತು. ದಾಖಲಾತಿಗಾಗಿ ಅಲ್ಲಿಗೆ ಹೋದಾಗ ಆ ಶಾಲೆ ಈ ಶೈಕ್ಷಣಿಕ ವರ್ಷದಿಂದ(2019–20) ಮುಚ್ಚಿರುವುದು ಗೊತ್ತಾಗಿದೆ. ಹಾಗಾಗಿ ವಿದ್ಯಾರ್ಥಿಗೆ ಆರ್‌ಟಿಇ ಅಡಿ ಶಿಕ್ಷಣ ಪಡೆಯುವ ಅವಕಾಶ ಕೈತಪ್ಪಿದೆ.

‘ಮ್ಯಾಪಿಂಗ್ ಮಾಡುವಾಗ ಇಲ್ಲದ ಶಾಲೆಯನ್ನು ಆರ್‌ಟಿಇ ಪಟ್ಟಿಯಲ್ಲಿ ಹೇಗೆ ಸೇರಿಸಿದರು. ಇದು ಶಿಕ್ಷಣ ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ’ ಎಂದು ಆರ್‌ಟಿಇ ಕಾರ್ಯಪಡೆಯ ಸಂಚಾಲಕ ಜಿ.ನಾಗಸಿಂಹರಾವ್ ಹರಿಹಾಯ್ದರು.

ADVERTISEMENT

‘ಆಯಾ ಪ್ರದೇಶದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳನ್ನು ಸರಿಯಾಗಿ ಮ್ಯಾಪಿಂಗ್‌ ಮಾಡಿ ಜಾಲತಾಣಕ್ಕೆ ಅಪ್‌ಲೋಡ್‌ ಮಾಡಿಲ್ಲ. ಇದರಿಂದಾಗಿ ಹಲವಾರು ಮಕ್ಕಳು ಆರ್‌ಟಿಇ ಸೀಟುಗಳಿಂದ ವಂಚಿತರಾಗಿದ್ದಾರೆ. ಈ ತಪ್ಪು ಸರಿಪಡಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

‘ಈ ಲೋಪದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿಯಲ್ಲಿ ವಿಚಾರಿಸಿದರೆ, ಸರಿಯಾಗಿ ಸ್ಪಂದಿಸುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೋಷಕರು ತಿಳಿಸಿದರು.

‘ಶಾಲೆಗಳ ಮ್ಯಾಪಿಂಗ್ 2019ರ ಜನವರಿಯಲ್ಲಿ ನಡೆದಿತ್ತು. ಕಳೆದ ಶೈಕ್ಷಣಿಕ ವರ್ಷದಲ್ಲಿ ಮಾರುತಿ ವಿದ್ಯಾಲಯ (ಅನುದಾನಿತ ಶಾಲೆ) ಕಾರ್ಯನಿರ್ವಹಿಸುತ್ತಿತ್ತು. ಹಾಗಾಗಿ ಮ್ಯಾಪಿಂಗ್‌ನಲ್ಲಿ ಸೇರಿಸಿ ಪಟ್ಟಿ ಕಳುಹಿಸಿದ್ದೆವು. ನಾಲ್ಕೇ ವಿದ್ಯಾರ್ಥಿಗಳಿದ್ದ ಕಾರಣ ಆ ಶಾಲೆಯನ್ನು ಮುಚ್ಚಲಾಗಿದೆ. ಹಾಗಾಗಿ ಗೊಂದಲ ಉಂಟಾಗಿರಬಹುದು’ ಎಂದು ಬಿಇಒ ಪ್ರಭಾ ಅಲೆಕ್ಸಾಂಡರ್‌ ವಿವರಿಸಿದರು.

‘ತೊಂದರೆಗೊಳಗಾಗ ಪೋಷಕರು ಕಚೇರಿಗೆ ಬಂದರೆ ಸಮಸ್ಯೆ ಬಗೆಹರಿಸಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.