ADVERTISEMENT

‘ಜಂಟಿ’ ರದ್ದು; ‘ಹೆಚ್ಚುವರಿ ಆಯುಕ್ತ’ ಸೃಷ್ಟಿಗೆ ತರಾತುರಿ

‘ಡಿಪಿಸಿ’ ಸಭೆಯಲ್ಲಿ ತೀರ್ಮಾನ * ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೆ ದೂರು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:41 IST
Last Updated 27 ಸೆಪ್ಟೆಂಬರ್ 2019, 19:41 IST
   

ಬೆಂಗಳೂರು:‌ ‘ಜಂಟಿ ಆಯುಕ್ತ (ನಗರ)’ ಹುದ್ದೆಯನ್ನು ರದ್ದುಪಡಿಸಲು ಮುಂದಾಗಿರುವ ಸಾರಿಗೆ ಇಲಾಖೆ, ಆ ಹುದ್ದೆಯನ್ನೇ ‘ಹೆಚ್ಚುವರಿ ಆಯುಕ್ತ’ ಹುದ್ದೆಗೆ ಉನ್ನತೀಕರಿಸಲು ತರಾತುರಿಯಲ್ಲಿ ತೀರ್ಮಾನ ಕೈಗೊಂಡಿದೆ.

‘ಇಲಾಖೆಯ ಅಧಿಕಾರಿಯೊಬ್ಬರಿಗೆ ಆಯಕಟ್ಟಿನ ಹುದ್ದೆ ನೀಡಲು ಅನುಕೂಲವಾಗುವಂತೆ ಪದೋನ್ನತಿ ಸಮಿತಿ ಸಭೆಯಲ್ಲಿ (ಡಿಪಿಸಿ) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ತೀರ್ಮಾನಕ್ಕೆ ಅಧಿಕಾರಿಗಳ ವಲಯದಲ್ಲೇ ಆಕ್ಷೇಪ ವ್ಯಕ್ತವಾಗುತ್ತಿದೆ.

‘ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ‘ಜಂಟಿ ಆಯುಕ್ತ (ನಗರ)’ ಹುದ್ದೆ ರದ್ದುಪಡಿಸಿ ‘ಹೆಚ್ಚುವರಿ ಆಯುಕ್ತ’ ಹುದ್ದೆ ಸೃಷ್ಟಿಸುವ ಅಗತ್ಯ ಏನಿದೆ’ ಎಂದು ಕೆಲ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.

ADVERTISEMENT

ಎಸಿಎಸ್‌ಗೆ ದೂರು: ‘ಜಂಟಿ ಆಯುಕ್ತ ಹುದ್ದೆ ರದ್ದುಪಡಿಸುತ್ತಿರುವ ಕ್ರಮ ನಿಯಮಬಾಹಿರ’ ಎಂದು ಆರೋಪಿಸಿ ಕೆಲವು ಅಧಿಕಾರಿಗಳು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಈಗಾಗಲೇ ದೂರು ನೀಡಿದ್ದಾರೆ.

‘ಹುದ್ದೆ ಉನ್ನತೀಕರಿಸುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಪ್ರಕ್ರಿಯೆ ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ಇದು ವಿರುದ್ಧವಾಗಿದೆ.ಇದಕ್ಕೆ ನಮ್ಮ ಆಕ್ಷೇಪವಿದೆ’ ಎಂದು ಹೇಳಿದ್ದಾರೆ.

‘ಇಲಾಖೆಯಲ್ಲಿ 5 ಜಂಟಿ ಆಯುಕ್ತರ ಹುದ್ದೆಗಳು ಮಂಜೂರಾಗಿವೆ. ಆದರೆ, ಈಗ ಇಬ್ಬರು ಹೆಚ್ಚುವರಿ ಸೇರಿ 7 ಮಂದಿ ಜಂಟಿ ಆಯುಕ್ತರಿದ್ದಾರೆ. ಒಂದು ಜಂಟಿ ಆಯುಕ್ತರ (ನಗರ) ಹುದ್ದೆಯನ್ನು ಉನ್ನತೀಕರಿಸಿದರೆ, ಇಬ್ಬರು ಜಂಟಿ ಆಯುಕ್ತರು ಹೆಚ್ಚುವರಿಯಾಗಿಯೇ ಮುಂದುವರಿಯಲಿದ್ದಾರೆ’ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗೆ ದೂರು: ವೀರಾಂಜನೇಯ ಬಸ್‌ ಸರ್ವೀಸ್ ಮಾಲೀಕ ಕೆ.ಆರ್.ರಾಜ್‌ಕುಮಾರ್ ಎಂಬುವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ದೂರು ನೀಡಿದ್ದಾರೆ.

‘ಹಲವು ಆರೋಪ ಎದುರಿಸುತ್ತಿರುವ ಇಲಾಖೆಯ ಜಂಟಿ ಆಯುಕ್ತಜ್ಞಾನೇಂದ್ರಕುಮಾರ್ ಅವರಿಗೆ ಬಡ್ತಿ ನೀಡಿ, ಹೆಚ್ಚುವರಿ ಆಯುಕ್ತರನ್ನಾಗಿ ಮಾಡಲಾಗುತ್ತಿದೆ. ಅದಕ್ಕಾಗಿ ಹಳೇ ಹುದ್ದೆ ರದ್ದುಪಡಿಸಿ ಹೊಸ ಹುದ್ದೆಯನ್ನೇ ಸೃಷ್ಟಿಸಲಾಗುತ್ತಿದೆ. ಈ ಕಾನೂನುಬಾಹಿರ ಪ್ರಕ್ರಿಯೆ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

‘ಬೆಳವಣಿಗೆ ಸಹಿಸದವರಿಂದ ಆರೋಪ’

‘ಬೆಳವಣಿಗೆ ಸಹಿಸದ ಹಲವರು ನನ್ನ ವಿರುದ್ಧ ಸುಖಾಸುಮ್ಮನೇ ಆರೋಪ ಮಾಡಿ ದೂರು ನೀಡಿದ್ದರು. ಎಲ್ಲ ಪ್ರಕರಣಗಳಿಂದಲೂ ನಾನು ಖುಲಾಸೆಗೊಂಡಿದ್ದೇನೆ. ಈಗ, ಭಾರತೀಯ ನಾಗರಿಕ ಸೇವೆಗೂ (ಐಎಎಸ್‌) ನನ್ನ ಹೆಸರು ಶಿಫಾರಸು ಆಗಿದೆ’ ಎಂದು ಜ್ಞಾನೇಂದ್ರಕುಮಾರ್ ಸ್ಪಷ್ಟಪಡಿಸಿದರು.

‘ಉನ್ನತ ಅಧಿಕಾರಿಗಳು ಹಾಗೂ ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯೇ ನಿಯಮಾವಳಿ ಪ್ರಕಾರ ಬಡ್ತಿ ನೀಡುತ್ತಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆ ಆಗಿಲ್ಲ. ನಮ್ಮ ಇಲಾಖೆಯಲ್ಲೇ ಇರುವ ಅಧಿಕಾರಿಯೊಬ್ಬರು, ಹೊರಗಿನವರನ್ನು ಮುಂದಿಟ್ಟುಕೊಂಡು ಸುಖಾಸುಮ್ಮನೇ ಆರೋಪ ಮಾಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.