ADVERTISEMENT

ಶಿಕ್ಷಣ ಇಲಾಖೆ ಭ್ರಷ್ಟಾಚಾರದ ವಿರುದ್ಧ ಪ್ರಧಾನಿಗೆ ದೂರು

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 19:45 IST
Last Updated 26 ಆಗಸ್ಟ್ 2022, 19:45 IST
   

ಬೆಂಗಳೂರು: ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಿತಿ ಮೀರಿದ ಭ್ರಷ್ಟಾಚಾರ, ಕಿರುಕುಳದ ಪರಿಣಾಮ ರಾಜ್ಯದ ಹಲವು ಖಾಸಗಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿವೆ ಎಂದು ಆರೋಪಿಸಿ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.

ಲಂಚ ಕೊಡದೇ ಶಾಲೆಗಳ ಮಾನ್ಯತೆ ನವೀಕರಣ ಮಾಡುತ್ತಿಲ್ಲ. ಆರ್‌ಟಿಇ ಶುಲ್ಕ ಬಿಡುಗಡೆ ಮಾಡಿಲ್ಲ. ಅನ್ಯ ಪಠ್ಯಕ್ರಮ ಅನುಸರಿಸಲು ಎನ್‌ಒಸಿ ಕೊಡುತ್ತಿಲ್ಲ. ದಾಖಲೆಗಳ ಪರಿಶೀಲನೆ ನೆಪದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ, ವಸೂಲಿ ದಂಧೆ ನಡೆಸುತ್ತಿದ್ದಾರೆ. ಸಚಿವರಿಗೆ ನೀಡಿದ ಮನವಿಗಳು ಕಸದ ಬುಟ್ಟಿ ಸೇರಿವೆ ಎಂದು ಪತ್ರದಲ್ಲಿ ದೂರಿದ್ದಾರೆ.

ಲಂಚ ಪಡೆಯಲೆಂದೇ ಅಗ್ನಿ ಸುರಕ್ಷತೆ, ಕಟ್ಟಡ ದಕ್ಷತೆಯ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಆರ್‌ಟಿಇ ಶುಲ್ಕ ಪಾವತಿಸಲು ಶೇ 40ರಷ್ಟು ಲಂಚ ನೀಡಬೇಕಿದೆ. ಲಂಚ ನೀಡಲಾಗದೆ ಸಾವಿರಾರು ಶಾಲೆಗಳು ಶುಲ್ಕ ಪಾವತಿಗೆ ಅರ್ಜಿಗಳನ್ನೇ ಸಲ್ಲಿಸಿಲ್ಲ. ರಾಜ್ಯಪಠ್ಯಕ್ರಮ ಕೈಬಿಟ್ಟು ಸಿಬಿಎಸ್‌ಸಿ, ಐಸಿಎಸ್‌ಇಗೆ ಬದಲಾಗಲು ಎನ್‌ಒಸಿ ಅಗತ್ಯವಿದೆ. ಎನ್‌ಒಸಿ ನೀಡಲೂ ₹ 15 ಲಕ್ಷದವರೆಗೆ ಪ್ಯಾಕೇಜ್‌ ನೀಡಬೇಕಿದೆ ಎಂದು ಅವ್ಯವಹಾರದ ಪಟ್ಟಿಯನ್ನೇ ನೀಡಿದ್ದಾರೆ.

ADVERTISEMENT

ಅಧಿಕಾರಿಗಳು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ನಂತರ ವಸೂಲಿಗೆ ಇಳಿಯುತ್ತಾರೆ. ವರ್ಷಕ್ಕೆ ಒಮ್ಮೆ ಇಂತಹ ವರ್ಗಾವಣೆ ದಂಧೆ ನಡೆಯುತ್ತದೆ. ಅತ್ತ ಸರ್ಕಾರಿ ಶಾಲೆಗಳನ್ನೂ ಅಭಿವೃದ್ಧಿ ಮಾಡುತ್ತಿಲ್ಲ. ಇವೆಲ್ಲ ಮರೆ ಮಾಚಲು ಧಾರ್ಮಿಕ ವಿಚಾರಗಳನ್ನು ಎತ್ತಿ ಶಾಲಾ ವಾತಾವರಣವನ್ನೇ ಕೆಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.