ADVERTISEMENT

ರಾಜ್ಯದಲ್ಲಿ ಶೀಘ್ರ 3.5 ಲಕ್ಷ ಗ್ರಾಮೀಣ ಮನೆಗಳ ನಿರ್ಮಾಣ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 10:39 IST
Last Updated 4 ಫೆಬ್ರುವರಿ 2020, 10:39 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು:ರಾಜ್ಯದಲ್ಲಿ ಜಾರಿಯಿರುವ ವಿವಿಧ ವಸತಿ ಯೋಜನೆಗಳಡಿ ಗ್ರಾಮಗಳಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು 3.5 ಲಕ್ಷ ಮನೆಗಳನ್ನು ಜೂನ್ ತಿಂಗಳ ಒಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಆನೇಕಲ್ ತಾಲ್ಲೂಕಿನ ಸರ್ಜಾಪುರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ಅಸಂಘಟಿತ ಹಾಗೂ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಫಲಾನುಭವಿಗಳಿಗೆ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗೃಹ ಮಂಡಳಿ ವತಿಯಿಂದ 21 ಸಾವಿರ ನಿವೇಶನ ಅಭಿವೃದ್ಧಿ ಮತ್ತು 770 ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪ್ರಧಾನ ಮಂತ್ರಿ ಆವಾಜ್ಯೋಜನೆಯಡಿ 83,119 ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಬೆಂಗಳೂರಿನ ಸತ್ತಮುತ್ತಲಿನ ಪಟ್ಟಣ ಪ್ರದೇಶಗಳಿಗೆ ಅಳವಡಿಸಲು ಉದ್ದೇಶಿರುವ ಸ್ಯಾಟಲೈಟ್ ಟೌನ್ ವರ್ತುಲ ರಸ್ತೆ ಆನೇಕಲ್ ಮೂಲಕ ಹಾದು ಹೋಗಲಿದ್ದು, ಇದರಿಂದಾಗಿ ಇಲ್ಲಿನ ಜನರು ವಾಣಿಜ್ಯ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದರು.

ಕೇಂದ್ರ ಸರ್ಕಾರವು ಬೆಂಗಳೂರು ನಗರದಲ್ಲಿ ಸಬ್ಅರ್ಬನ್ ರೈಲ್ವೆ ಕಾಮಗಾರಿ ಘೋಷಿಸಿದೆ. ಈ ಭಾಗದ ಹುಸ್ಕೂರು, ಸಿಂಗೇನ ಅಗ್ರಹಾರ, ಬೊಮ್ಮಸಂದ್ರ ಮೊದಲಾದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಕಂದಾಯ ಸಚಿವಆರ್.ಅಶೋಕ್,ಶಾಸಕರಾದ ಎಸ್.ಆರ್.ವಿಶ್ವನಾಥ್, ಎಂ.ಸತೀಶ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಸಿ.ಮುನಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.