
ಬೆಂಗಳೂರು: ಆರ್.ವಿ. ರಸ್ತೆ ನಮ್ಮ ಮೆಟ್ರೊ ನಿಲ್ದಾಣದಲ್ಲಿ ಕೆಲವು ವ್ಯಕ್ತಿಗಳ ಗುಂಪು ಹಳದಿ ಮಾರ್ಗದ ಮೊದಲ ರೈಲು ಹೊರಡುವುದಕ್ಕೆ ಅಡ್ಡಿಪಡಿಸಿದ್ದರಿಂದ, 35 ನಿಮಿಷ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.
ಆರ್.ವಿ. ಮೆಟ್ರೊ ನಿಲ್ದಾಣದಲ್ಲಿ ಉದ್ದೇಶಪೂರ್ವಕವಾಗಿಯೇ ಗುಂಪೊಂದು ರೈಲು ಸಂಚಾರಕ್ಕೆ ಅಡ್ಡಿಪಡಿಸಿತು. ಇದರಿಂದ ಸೋಮವಾರ ಬೆಳಿಗ್ಗೆ 6ಕ್ಕೆ ಹೊರಡಬೇಕಿದ್ದ ರೈಲು 6.35ಕ್ಕೆ ಹೊರಟಿತು. ಹೀಗಾಗಿ, ಮಾರ್ಗದ ಎಲ್ಲ ರೈಲುಗಳ ಸಂಚಾರದಲ್ಲಿ ವಿಳಂಬವಾಯಿತು. ಸೇವೆಯನ್ನು ಸ್ಥಿರಗೊಳಿಸಲು ಒಂದು ರೈಲನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಶಾರ್ಟ್–ಲೂಪ್ ಮಾಡಲಾಯಿತು. ಇಂತಹ ಕೃತ್ಯದಿಂದ ಅನೇಕ ಸಹ ಪ್ರಯಾಣಿಕರಿಗೆ ಅನನುಕೂಲ ಉಂಟು ಮಾಡಿದ್ದಷ್ಟೇ ಅಲ್ಲದೆ, ಮೆಟ್ರೊ ಸಂಚಾರದ ಸುರಕ್ಷತೆ ಮತ್ತು ದಕ್ಷತೆ ಕಾರ್ಯಾಚರಣೆಗೆ ಅಡ್ಡಿ ಉಂಟು ಮಾಡಿದ್ದರಿಂದ, ಸಜೆ, ದಂಡ ವಿಧಿಸಲು ವ್ಯಕ್ತಿಗಳ ಮೇಲೆ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.
ಹಳದಿ ಮಾರ್ಗದಲ್ಲಿ ನ.1ರಿಂದ ಐದನೇ ರೈಲಿನ ಸಂಚಾರ ಆರಂಭವಾಗಿದ್ದು, ಬೆಳಿಗ್ಗೆ 6 ಗಂಟೆಗೆ ಸೇವೆ ಆರಂಭವಾಗುತ್ತಿದೆ. ದಟ್ಟಣೆ ಅವಧಿಯಲ್ಲಿ ರೈಲುಗಳ ಸಂಚಾರವನ್ನು 19 ನಿಮಿಷದಿಂದ 15 ನಿಮಿಷಕ್ಕೆ ಕಡಿಮೆಗೊಳಿಸಲಾಗಿದೆ. ಮುಂಬರುವ ತಿಂಗಳಿಂದ ಹೆಚ್ಚುವರಿ ರೈಲುಗಳ ಸಂಚಾರ ಕಾರ್ಯಾರಂಭ ಮಾಡಲಿದ್ದು, ಹಳದಿ ಮಾರ್ಗದ ಸೇವೆ ಇನ್ನಷ್ಟು ಉತ್ತಮವಾಗಲಿದೆ ಎಂದು ತಿಳಿಸಲಾಗಿದೆ.
15 ಮಂದಿ ವಿರುದ್ಧ ಎಫ್ಐಆರ್: ಹಳದಿ ಮಾರ್ಗದ ಪಥ ಬದಲಾವಣೆಗಾಗಿ ಕಾಯುತ್ತಿದ್ದ ಪ್ರಯಾಣಿಕರ ಪೈಕಿ 15 ಜನರ ಗುಂಪು ಹಳದಿ ಮಾರ್ಗದಲ್ಲಿ ಇನ್ನೂ ‘ಏಕೆ ರೈಲು ಬಂದಿಲ್ಲ‘ ಎಂದು ಏರು ಧ್ವನಿಯಲ್ಲಿ ಕೇಳಿದ್ದಾರೆ. ಆಗ ಅಲ್ಲಿದ್ದ ಮೆಟ್ರೊ ಸಿಬ್ಬಂದಿ ಹಳದಿ ಮಾರ್ಗದಲ್ಲಿ ಮೆಟ್ರೊ ರೈಲು ಬೆಳಿಗ್ಗೆ 6ಕ್ಕೆ ಆರಂಭವಾಗಲಿದೆ ಎಂದು ತಿಳಿಸಿದರು. ಬೆಳಿಗ್ಗೆ 6ಕ್ಕೆ ನಿಲ್ದಾಣದಿಂದ ಮೆಟ್ರೊ ರೈಲು ಹೊರಡಬೇಕಿತ್ತು. ಆದರೆ, ಅಪರಿಚಿತರು ರೈಲು ಸಂಚರಿಸಲು ಬಿಡದೇ ಬಾಗಿಲಿನಲ್ಲಿ ಕಾಲನ್ನು ಇಟ್ಟು ಅಡಚಣೆ ಮಾಡಿದ್ದರು. 15 ಮಂದಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಸ್ಫೋಟಿಸುವುದಾಗಿ ಬೆದರಿಕೆ
ನಗರದ ಮೆಟ್ರೊ ನಿಲ್ದಾಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿದ್ದು, ಈ ಸಂಬಂಧ ವಿಲ್ಸನ್‌ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಆರ್‌ಸಿಎಲ್ ಸಹಾಯಕ ನಿರ್ವಾಹಕ ಎಂಜಿನಿಯರ್ ರತೀಶ್ ಅವರು ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆ 351 (2), 351(3) ಅಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ನ.11ರಂದು ರಾತ್ರಿ 11.25ಕ್ಕೆ ಬಿಎಂಆರ್‌ಸಿಎಲ್ ಅಧಿಕೃತ ಇ –ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಬಂದಿತ್ತು. ರಾಜೀವ್ ಶೆಟ್ಟಿ ಹೆಸರಿನ ಇ–ಮೇಲ್ ವಿಳಾಸದಿಂದ ಸಂದೇಶ ಬಂದಿದೆ ಎಂದು ಪೊಲೀಸರು ಹೇಳಿದರು.
‘ನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೊ ಸಿಬ್ಬಂದಿ ತಮ್ಮ ಕೆಲಸ ಮುಗಿದ ಮೇಲೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಎಚ್ಚರಿಕೆಯಿಂದ ಇರಿ. ಇದು ಮುಂದುವರಿದರೆ ಯಾವುದಾದರೂ ಮೆಟ್ರೊ ನಿಲ್ದಾಣವನ್ನು ಸ್ಫೋಟಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.