ಬೆಂಗಳೂರು: ಕಬ್ಬಿಣದ ಸಲಾಕೆಯಿಂದ ಹೊಡೆದು ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆಯ ಭಕ್ಷಿಗಾರ್ಡನ್‌ನ ನಿವಾಸಿ ದಾದಾಪೀರ್ (25) ಎಂಬಾತನನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ, ಪಾದರಾಯನಪುರದ ನಿವಾಸಿ ಉಮ್ಮೆಸಲ್ಮಾ (22) ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಮೈಸೂರು ರಸ್ತೆಯ ಅಂಚೆಪಾಳ್ಯದ ನಿವಾಸಿ ಸಮೀರ್ (26) ಎಂಬುವರನ್ನು ಕೊಲೆ ಮಾಡಿ ಬನಶಂಕರಿ ಆರನೇ ಹಂತದ ಏಳನೇ ಬ್ಲಾಕ್‌ನ ತುರಹಳ್ಳಿ ಅರಣ್ಯ ಪಕ್ಕದ ರಸ್ತೆಯಲ್ಲಿ ಮೃತದೇಹ ಎಸೆದು ಪರಾರಿ ಆಗಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು.
‘ಕೆಲವು ವರ್ಷಗಳ ಹಿಂದೆ ಸಮೀರ್ ಮದುವೆ ಆಗಿದ್ದರು. ಸಮೀರ್ ಅವರ ಪತ್ನಿ ಜತೆಗೆ ಆರೋಪಿ ದಾದಾಪೀರ್ ಸ್ನೇಹ ಬೆಳೆಸಿಕೊಂಡಿದ್ದ. ಸ್ನೇಹ ಮುಂದುವರೆಸಲು ಸಮೀರ್ ಅಡ್ಡಿ ಆಗಲಿದ್ದಾರೆ ಎಂದು ಭಾವಿಸಿ ಕೊಲೆಗೆ ಸಂಚು ರೂಪಿಸಿ ಕೃತ್ಯ ಎಸಗಲಾಗಿತ್ತು. ಕೃತ್ಯದಲ್ಲಿ ಸಮೀರ್‌ನ ಪತ್ನಿಯ ಕೈವಾಡ ಇರುವ ಸಾಧ್ಯತೆಯಿದ್ದು, ಆಕೆಯನ್ನೂ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.