ADVERTISEMENT

ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿದರೆ ಕ್ರಿಮಿನಲ್ ಪ್ರಕರಣ

ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 17:00 IST
Last Updated 9 ಜನವರಿ 2021, 17:00 IST

ಬೆಂಗಳೂರು: ‘ಕರ್ಕಶ ಶಬ್ದವನ್ನುಂಟುಮಾಡುವ ಸೈಲೆನ್ಸರ್‌ಗಳನ್ನುವಾಹನಗಳಲ್ಲಿ ಅಳವಡಿಸಿದರೆ ಹಾಗೂ ದ್ವಿಚಕ್ರ ವಾಹನಗಳಲ್ಲಿ ವ್ಹೀಲಿಂಗ್ ಮಾಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಎಚ್ಚರಿಕೆ ನೀಡಿದರು.

ರಾಜಾಜಿನಗರ ಸಂಚಾರ ಪೊಲೀಸರು ಶನಿವಾರ ಆಯೋಜಿಸಿದ್ದ ‘ಸಂಚಾರ ಸಂಪರ್ಕ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಸ್ಯೆ ಹೇಳಿಕೊಂಡ ನಿವಾಸಿ ಗೀತಾ ಮಿಶ್ರಾ, ‘ನಮ್ಮ ಪ್ರದೇಶದಲ್ಲಿ ವಾಹನಗಳ ಸಂಚಾರದಿಂದ ಶಾಂತಿ ಇಲ್ಲದಂತಾಗಿದೆ. ಕೆಲವರು ತಮ್ಮ ವಾಹನಗಳಿಗೆ ಕರ್ಕಶ ಶಬ್ದ ಹೊರಹೊಮ್ಮಿಸು ಸೈಲೆನ್ಸರ್ ಅಳವಡಿಸಿ ಸಂಚರಿಸುತ್ತಿದ್ದಾರೆ. ಇದರಿಂದ ನಿತ್ಯವೂ ಕಿರಿಕಿರಿ ಆಗಿದ್ದು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದರು.

ADVERTISEMENT

ದ್ವಿಚಕ್ರ ವಾಹನಗಳ ವ್ಹೀಲಿಂಗ್ ಬಗ್ಗೆಯೂ ನಿವಾಸಿಗಳು ಅಳಲು ತೋಡಿಕೊಂಡರು.

ಕಮಿಷನರ್ ಕಮಲ್‌ ಪಂತ್, ‘ಕರ್ಕಶ ಶಬ್ದದ ಸೈಲೆನ್ಸರ್ ಅಳವಡಿಸಿದ ವಾಹನಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಅವರಿಂದ ₹ 1 ಲಕ್ಷ ಮೊತ್ತದ ಬಾಂಡ್ ಪಡೆಯುತ್ತೇವೆ. ಬಾಂಡ್‌ ನೀಡಿದರೆ ಮಾತ್ರ ಿಂತಹ ವಾಹನ ಬಿಡುಗಡೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ’ ಎಂದರು.

ಸಂಚಾರ ನಿಯಮಗಳ ಜಾಗೃತಿಯ ಅನಿಮೇಶನ್ ಕಿರುಚಿತ್ರವನ್ನು ಬಿಡುಗಡೆ ಮಾಡಿದರು. ಜಂಟಿ ಕಮಿಷನರ್ ಡಾ. ಬಿ.ಆರ್. ರವಿಕಾಂತೇಗೌಡ ಹಾಗೂ ಡಿಸಿಪಿ ಸೌಮ್ಯಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.