ADVERTISEMENT

ಸಂಜಯ ಗಾಂಧಿ ಆಸ್ಪತ್ರೆಗೆ ಬರಲಿದೆ ‘ಮಾಕೊ’!

ಮೂಳೆ ಶಸ್ತ್ರಚಿಕಿತ್ಸೆಗೆ ಇನ್ನು ಮುಂದೆ ಕಾಯಬೇಕಿಲ್ಲ l ಅಮ್ಮಾ ವಿ.ವಿಯಲ್ಲಿ ವೈದ್ಯರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2019, 19:28 IST
Last Updated 27 ಜುಲೈ 2019, 19:28 IST
ಮಾಕೊ ರೋಬೊಟ್
ಮಾಕೊ ರೋಬೊಟ್   

ಬೆಂಗಳೂರು: ಮೂಳೆ ಶಸ್ತ್ರಚಿಕಿತ್ಸೆ ಮಾಡಲು ನಗರದ ಸಂಜಯ ಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸಾ ಕೇಂದ್ರಕ್ಕೆ ಅಮೆರಿಕದಿಂದ ‘ಮಾಕೊ’ ಬರಲಿದೆ.

ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಎಂಆರ್‌ಐ ಹಾಗೂ ಹೈಟೆಕ್‌ ಮಾದರಿಯ ಶಸ್ತ್ರಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ. ಮೊಣಕಾಲು, ಸೊಂಟ ನೋವು ಸೇರಿ ವಿವಿಧ ಸಮಸ್ಯೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಆಸ್ಪತ್ರೆಯಲ್ಲಿ ವರ್ಷಕ್ಕೆ ಅಂದಾಜು 6 ಸಾವಿರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.ಇಷ್ಟಾಗಿಯೂ ನೂರಾರು ಮಂದಿ ಶಸ್ತ್ರಚಿಕಿತ್ಸೆಗೆ ಕಾಯಬೇಕಿದೆ. ಇದನ್ನು ತಪ್ಪಿಸಲು ಹಾಗೂ ಶಸ್ತ್ರಚಿಕಿತ್ಸೆಯನ್ನು ಸುಲಭವಾಗಿಸಲು ‘ಮಾಕೊ’ ರೋಬೊಟ್‌ ಪರಿಚಯಿಸಲಾಗುತ್ತಿದೆ.

‘ಮಂಡಿಚಿಪ್ಪು ಬದಲಿ ಸೇರಿದಂತೆ ವಿವಿಧ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲು ವಿದೇಶದಲ್ಲಿ ರೋಬೊಟಿಕ್ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಜತೆಗೆ ₹10 ಲಕ್ಷ ವೆಚ್ಚದಲ್ಲಿ ರೋಬೊಟಿಕ್‌ ಯಂತ್ರವನ್ನು ಖರೀದಿಸಿ, ಶಸ್ತ್ರಚಿಕಿತ್ಸಾ ಕೇಂದ್ರದಲ್ಲಿ ಅಳವಡಿಸಲಾಗುತ್ತದೆ. ಇದರಿಂದ ನಿಖರ ಹಾಗೂ ವೇಗವಾಗಿ ಶಸ್ತ್ರಚಿಕಿತ್ಸೆ ಮಾಡಬಹುದು’ ಎಂದುಆಸ್ಪತ್ರೆಯ ನಿರ್ದೇಶಕ ಡಾ.ಎಚ್‌.ಎಸ್.ಚಂದ್ರಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೊಚ್ಚಿಯಲ್ಲಿ ತರಬೇತಿ: ‘ಆಸ್ಪತ್ರೆಯಲ್ಲಿಪ್ರತಿ ತಿಂಗಳಿಗೆ 50ರಿಂದ 60 ಚಿಪ್ಪು ಬದಲಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇಷ್ಟಾಗಿಯೂ ಕೆಲವರ
ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತಿದ್ದೇವೆ.ರೋಬೊಟ್‌ ಬಂದ ಬಳಿಕ ರೋಗಿಗಳು ಕಾಯುವುದು ತಪ್ಪಲಿದೆ. ರಾಜ್ಯದಲ್ಲಿ ಬೇರೆಲ್ಲೂ ಮೂಳೆ ಶಸ್ತ್ರಚಿಕಿತ್ಸೆ ವಿಭಾಗದಲ್ಲಿ ರೋಬೊಟಿಕ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿಲ್ಲ. ಹಾಗಾಗಿ, ನಮ್ಮವೈದ್ಯರನ್ನು ತರಬೇತಿಗೆ ಕೊಚ್ಚಿಯ ಅಮ್ಮಾ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುತ್ತದೆ’ ಎಂದರು.

‘ಸದ್ಯ 180 ಒಳರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿನಿತ್ಯ250ರಿಂದ 300 ಹೊರ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ರೋಬೊಟಿಕ್‌ ಶಸ್ತ್ರಚಿಕಿತ್ಸೆ ಆರಂಭಿಸಿದ ಬಳಿಕ ರೋಗಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಹೊಸ ಕಟ್ಟಡ ನಿರ್ಮಿಸಲಾಗುತ್ತಿದ್ದು, ಹಾಸಿಗೆ ಸಂಖ್ಯೆ ಹೆಚ್ಚಾಗಲಿದೆ’ ಎಂದರು.

**

ವೈದ್ಯರು ಎಷ್ಟೇ ಕಾಳಜಿ ವಹಿಸಿ ಶಸ್ತ್ರಚಿಕಿತ್ಸೆ ಮಾಡಿದರೂ ಸಣ್ಣ ಪುಟ್ಟ ದೋಷವಾಗುವ ಸಾಧ್ಯತೆ ಇರುತ್ತದೆ. ಆದರೆ, ರೋಬೊಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಲೋಪಕ್ಕೆ ಅವಕಾಶ ಇರುವುದಿಲ್ಲ

–ಡಾ.ಎಚ್‌.ಎಸ್. ಚಂದ್ರಶೇಖರ್, ಸಂಜಯ ಗಾಂಧಿ ಆಸ್ಪತ್ರೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.