
ಬೆಂಗಳೂರು: ಸವಿತಾ ಸಮಾಜದವರನ್ನು ನಿಂದಿಸುವ ಪದ ಬಳಕೆಗೆ ಕಡಿವಾಣ ಹಾಕಲು ವಿಶೇಷ ಕಾನೂನು ರೂಪಿಸುವ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ನಗರದಲ್ಲಿ ಭಾನುವಾರ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹುಟ್ಟಿನಿಂದ ಜಾತಿ ಬಂದಿಲ್ಲ. ವೃತ್ತಿಯಿಂದ ಜಾತಿ ಬಂದಿದೆ. ಯಾರೂ ಯಾವುದೇ ಜಾತಿಯನ್ನು ಆಯ್ಕೆ ಮಾಡಿಕೊಂಡು ಹುಟ್ಟಿರುವುದಿಲ್ಲ. ನಾನು ಕೂಡ ಸಣ್ಣ ಸಮಾಜದಿಂದ ಬಂದವನು. ನಿಂದನಾತ್ಮಕ ಪದ ಬಳಸುವವರಿಗೆ ಹೆದರಿಕೆ ಹುಟ್ಟಬೇಕಿದ್ದರೆ ಅವರಿಗೆ ಶಿಕ್ಷೆಯಾಗಬೇಕು. ಶಿಕ್ಷೆಯಾಗಬೇಕಾದರೆ ಅದಕ್ಕೆ ಸರಿಯಾದ ಕಾನೂನು ಬೇಕು’ ಎಂದು ಹೇಳಿದರು.
‘ಸವಿತಾ ಸಮುದಾಯದವರು ಒಗ್ಗಟ್ಟಿನಿಂದ ಮುನ್ನಡೆಯ ಬೇಕು. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಸಣ್ಣ ಜಾತಿ ಸಮುದಾಯಗಳು ಮೊದಲು ಒಗ್ಗಟ್ಟಾಗುವ ಅಗತ್ಯವಿದೆ. ಆದರೆ, ಒಗ್ಗಟ್ಟಿಗೆ ವಿರುದ್ಧವಾಗಿ ಅಪಸ್ವರವು ಆಯಾ ಸಮಾಜದಿಂದಲೇ ಮೊದಲು ಬರುತ್ತಿರುವುದು ವಿಪರ್ಯಾಸ’ ಎಂದರು.
ಕ್ಷೌರ ಮಾಡುವ ಮೂಲಕ ಜನರನ್ನು ಸ್ವಚ್ಛವಾಗಿ ಇಡುವ ಸಮಾಜ ಇದು. ಹಡಪದ ಅಪ್ಪಣ್ಣ ಮತ್ತು ಸವಿತಾ ಮಹರ್ಷಿಗಳು ಒಂದೇ ಕಾಲದಲ್ಲಿ ದೀಕ್ಷೆ ತೆಗೆದುಕೊಂಡವರು. ಈ ಎರಡು ಸಮುದಾಯದವರ ವೃತ್ತಿ ಒಂದೆ. ಜೊತೆಗೆ ಮಂಗಳವಾದ್ಯ ನುಡಿಸುವ ಕಸುಬನ್ನೂ ಸವಿತಾ ಸಮಾಜ ಮಾಡುತ್ತಿದೆ ಎಂದು ವಿವರಿಸಿದರು.
ಸವಿತಾ ಸಮಾಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್ ಮಾತನಾಡಿ, ‘ನಮ್ಮಲ್ಲಿ ಕೀಳರಿಮೆ ಹುಟ್ಟಿಸುವ ರೀತಿಯಲ್ಲಿ ನಿಂದನಾತ್ಮಕ ಪದವನ್ನು ಎಲ್ಲೆಡೆ ಬಳಸುತ್ತಿದ್ದಾರೆ. ನಾವು ಆರ್ಥಿಕವಾಗಿ ಬಲಿಷ್ಠರಾಗಿದ್ದರೆ ಯಾರೂ ನಿಂದಿಸುತ್ತಿರಲಿಲ್ಲ. ಎಲ್ಲ ಕ್ಷೇತ್ರದಲ್ಲಿ ನಮ್ಮ ಸಮಾಜದವರು ಇದ್ದರೂ ಜಾತಿ ಹೇಳಿಕೊಳ್ಳಲು ಸಂಕೋಚ ಪಡುತ್ತಿದ್ದಾರೆ. ನಿಂದನೆ ಮಾಡುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆರಂಭದಲ್ಲಿ ಸಚಿವರನ್ನು ಒತ್ತಾಯಿಸಿದ್ದರು.
‘ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯರೊಬ್ಬರು ಕೂಡ ನಿಂದನಾತ್ಮಕ ಪದ ಬಳಸಿದ್ದರು. ಏನು ಕ್ರಮ ಕೈಗೊಂಡಿದ್ದೀರಿ? ಕಾನೂನು ಮಾಡಲು ಅನುದಾನವೇನು ಬೇಕಾಗಿಲ್ಲ’ ಎಂದು ಸಭೆಯಲ್ಲಿದ್ದ ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ನಾರಾಯಣ ಅವರು ತಿಳಿಸಿದರು.
‘ಎಲ್ಲರೂ ಬನ್ನಿ ನಾನೇ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿ ನಿಂದನಾ ಪದ ಬಳಸುವುದನ್ನು ನಿಯಂತ್ರಿಸಲು ಕಾನೂನು ಮಾಡಲು ಒತ್ತಾಯಿಸೋಣ. ನೀವೇ ದಿನಾಂಕ ನಿಗದಿಪಡಿಸಿ’ ಎಂದು ಶಿವರಾಜ ತಂಗಡಗಿ ಉತ್ತರಿಸಿದರು.
‘ಜಾತಿ ನಿಂದನೆ ಪದಗಳನ್ನು ಬಳಸುವವರ ವಿರುದ್ಧ ಕಾನೂನು ಮಾಡಲಾಗುವುದು ಎಂದು ರಾಜಕಾರಣಿಗಳು ಹೇಳುವುದನ್ನು ನಾನು ಬಾಲ್ಯದಿಂದಲೂ ಕೇಳಿಕೊಂಡೇ ಬಂದಿದ್ದೇನೆ. ಯಾರೂ ಕ್ರಮ ಕೈಗೊಂಡಿಲ್ಲ’ ಎಂದು ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.
‘ನಿಮ್ಮಲ್ಲೇ ಒಗ್ಗಟ್ಟಿಲ್ಲ. ಉತ್ತರ ಕರ್ನಾಟಕ–ದಕ್ಷಿಣ ಕರ್ನಾಟಕ ಸಸ್ಯಾಹಾರಿ–ಮಾಂಸಾಹಾರಿ ಎಂದು ಗುಂಪುಗಳನ್ನು ಮಾಡಿಕೊಂಡಿದ್ದೀರಿ. ಸಮಾಜದಲ್ಲಿ ಏನೇ ಇರಲಿ. ಎಲ್ಲರೂ ಒಗ್ಗಟ್ಟಾಗಿ ರಾಜಕೀಯ ಶಕ್ತಿ ಪ್ರದರ್ಶಿಸಿದರೆ ಸಮಸ್ಯೆಗಳು ಸರಿಯಾಗಲು ಸಾಧ್ಯ. ಬಜೆಟ್ ಅಧಿವೇಶನದ ಮೊದಲು ಅಥವಾ ನಂತರ ಮುಖ್ಯಮಂತ್ರಿ ಬಳಿಗೆ ನಿಯೋಗ ಹೋಗೋಣ‘ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.