ADVERTISEMENT

ಜಾತಿ ನಿಂದನೆ; ’ಜೀ ಕನ್ನಡ‘ ವಾಹಿನಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 19:01 IST
Last Updated 22 ಜನವರಿ 2021, 19:01 IST

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನಲ್ಲಿ ಜಾತಿ ನಿಂದನೆ ಮಾಡಿದ ಆರೋಪದಡಿ ಜೀ ಕನ್ನಡ ವಾಹಿನಿ ಮುಖ್ಯಸ್ಥರು ಸೇರಿ ಹಲವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಎಂ.ಎನ್‌. ನಂದೀಶ್ ಎಂಬುವರು ದೂರು ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ನಡೆಸಲಿದ್ದು, ಅವರೇ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಿದ್ದಾರೆ’ ಎಂದು ಅಶೋಕನಗರ ಠಾಣೆ ಮೂಲಗಳು ತಿಳಿಸಿವೆ.

‘ಕಾರ್ಯಕ್ರಮ ಆಯೋಜಕರು, ವಾಹಿನಿ ಮುಖ್ಯಸ್ಥರು, ಕಾರ್ಯಕ್ರಮ ನಿರ್ದೇಶಕರು ಹಾಗೂ ಇತರರನ್ನು ಆರೋಪಿಯನ್ನಾಗಿ ಮಾಡಲಾಗಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

‘ಇತ್ತೀಚೆಗಷ್ಟೇ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಸೀಸನ್ 2 ನಡೆದಿದೆ. ಆ ಕಾರ್ಯಕ್ರಮದಲ್ಲಿ ಕಲಾವಿದರೊಬ್ಬರು, ಕೊಕ್ಕೆ ಕೊರಮ ಜಾತಿಯನ್ನು ನಿಂದಿಸುವ ಮಾತುಗಳನ್ನಾಡಿದ್ದಾರೆ. ಆ ಸಂಭಾಷಣೆಯಿಂದ ಹಲವರಿಗೆ ನೋವಾಗಿದ್ದು, ಈ ಸಂಗತಿಯನ್ನು ನಂದೀಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಜೀ ಕನ್ನಡ’ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.