ಬೆಂಗಳೂರು: ‘ವೈಟ್ ಟಾಪಿಂಗ್ ಯೋಜನೆಯ ಸಂತ್ರಸ್ತರಲ್ಲಿ ನಾನೂ ಒಬ್ಬ. ಕಲ್ಯಾಣನಗರದ ಮುಖ್ಯ ರಸ್ತೆಯಲ್ಲಿ ನಮ್ಮ ಮನೆಯಿದೆ. ನಮ್ಮ ಮನೆಯ ಮುಂದಿನ ರಸ್ತೆಗೂ ಕಾಂಕ್ರಿಟ್ ಹಾಕುವ ಕೆಲಸ ನಡೆದಿದೆ. ಅಲ್ಲಿನ ಆಮೆಗತಿ ಕೆಲಸದಿಂದ ಆಗುತ್ತಿರುವ ಹಿಂಸೆಗೆ ಬೇಸತ್ತು ನಾವು ಸದ್ಯ ನೇಣು ಹಾಕಿಕೊಂಡಿಲ್ಲ. ನಮ್ಮ ಪುಣ್ಯ’
–ಕಾಮಗಾರಿ ನಡೆದಿರುವ ವೇಗಕ್ಕೆ ಸಿಟಿಜನ್ ಆ್ಯಕ್ಷನ್ ಫೋರಂ ಅಧ್ಯಕ್ಷ ಡಿ.ಎಸ್. ರಾಜಶೇಖರ್ ಆಕ್ರೋಶ ವ್ಯಕ್ತಪಡಿಸುವ ಪರಿ ಇದು. ‘ಮನೆ ಹತ್ತಿರದಲ್ಲೇ ಇದ್ದರೂ ದಟ್ಟಣೆಯಿಂದ ಬಲು ದೂರ ಇದ್ದಂತೆ ಭಾಸವಾಗುತ್ತಿದೆ. ಸಕಾಲಕ್ಕೆ ಮನೆಗೆ ತಲುಪುವುದೇ ಕಷ್ಟವಾಗಿದೆ’ ಎನ್ನುತ್ತಾರೆ.
‘ನಗರದ ನಿವಾಸಿಗಳು ಯಾರೂ ಈ ಯೋಜನೆ ಬೇಕೆಂದು ಕೇಳಿರಲಿಲ್ಲ. ಕಾಂಕ್ರಿಟ್‌ಗೆ ಮಾಡುತ್ತಿರುವ ವೆಚ್ಚದ ವಿವರ ಕೇಳಿದರೆ ಮೈ ಜುಮ್ ಎನ್ನುತ್ತದೆ. ಸಾರ್ವಜನಿಕರ ಅಭಿಪ್ರಾಯವನ್ನೂ ಕೇಳದೆ ಇಷ್ಟೊಂದು ಖರ್ಚು ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ತೆರಿಗೆದಾರರಿಗೇನು ಟೋಪಿ ಹಾಕ್ತೀರಾ’ ಎಂದು ಅವರು ಸಿಟ್ಟಿನಿಂದ ಪ್ರಶ್ನಿಸುತ್ತಾರೆ.
‘ವೈಟ್ ಟಾಪಿಂಗ್ ಯೋಜನೆಗೇ ನಮ್ಮ ವಿರೋಧವಿದೆ. ಕಾಂಕ್ರಿಟ್ ಬಳಿದುಕೊಂಡ ರಸ್ತೆಗಳು ನಗರದ ವಾತಾವರಣದಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಎಂಬುದು ವೈಜ್ಞಾನಿಕವಾಗಿ ಅಧ್ಯಯನವಾಗಿಲ್ಲ. ಅಪಘಾತಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಗರದ ಇತರ ರಸ್ತೆಗಳಿಗೆ ವಿಸ್ತರಿಸಬಾರದು’ ಎಂದು ಆಗ್ರಹಿಸುತ್ತಾರೆ.
ಸಿಟಿಜನ್ಸ್ ಫಾರ್ ಬೆಂಗಳೂರು ಸಂಘಟನೆಯ ಶ್ರೀನಿವಾಸ್ ಅಲವಿಲ್ಲಿ ಅವರದು ತುಸು ಭಿನ್ನವಾದ ಅಭಿಪ್ರಾಯ. ‘ನಗರದ ರಸ್ತೆಗಳಿಗೆ ವೈಟ್ ಟಾಪಿಂಗ್ ಸೌಲಭ್ಯ ಒಳ್ಳೆಯದೋ ಅಲ್ಲವೋ ಎನ್ನುವುದನ್ನು ನಾವೀಗ ಪರಿಶೀಲಿಸಬೇಕಿದೆ. ಈಗಾಗಲೇ ಎಂಟು ರಸ್ತೆಗಳ ಕಾಮಗಾರಿ ಮುಗಿದಿದೆಯಲ್ಲ? ಮಿಕ್ಕ ಯೋಜನೆಗಳನ್ನು ಸದ್ಯ ನಿಲ್ಲಿಸಿಬಿಡಬೇಕು. ಒಂದೆರಡು ವರ್ಷ ನೋಡೋಣ. ವೈಟ್ ಟಾಪಿಂಗ್ ಕುರಿತು ಬಿಬಿಎಂಪಿ ಹೇಳಿದ್ದೆಲ್ಲವೂ ನಿಜವೇ ಎಂಬುದನ್ನು ಪರಿಶೀಲಿಸೋಣ’ ಎನ್ನುತ್ತಾರೆ.
ಇದನ್ನೂ ಓದಿ:ವೈಟ್ ಟಾಪಿಂಗ್ ಯೋಜನೆ ಎಂಬ ಬಿಳಿಯಾನೆ
‘ವೈಟ್ ಟಾಪಿಂಗ್ ಈಗ ವೈಟ್ ಎಲಿಫೆಂಟ್ ಆಗುತ್ತಿದೆ. ಅಲ್ಲದೆ, ವಾಹನಗಳನ್ನು ಗುರಿಯಾಗಿಸಿಕೊಂಡು ನಿರ್ಮಿಸಿದ ಈ ರಸ್ತೆಗಳಲ್ಲಿ ಪಾದಚಾರಿಗಳನ್ನು ಕಡೆಗಣಿಸಲಾಗಿದೆ’ ಎಂದು ಆಕ್ಷೇಪಿಸುತ್ತಾರೆ. ‘ತಳಪಾಯವನ್ನು ಸಿದ್ಧಪಡಿಸಿಕೊಳ್ಳದೆ ನೇರವಾಗಿ ಟಾರು ರಸ್ತೆಯ ಮೇಲೆ ಕಾಂಕ್ರಿಟ್ ಹಾಕಲಾಗಿದೆ. ಅದರ ಬಾಳಿಕೆ ಹಾಗೂ ಪ್ರಯೋಜನದ ಕುರಿತು ಸಂಶಯ ಮೂಡಿದೆ’ ಎಂದು ಹೇಳುತ್ತಾರೆ.
ಬಸವನಗುಡಿಯ 90 ವರ್ಷದ ಅಜ್ಜಿ ವಿಜಯಲಕ್ಷ್ಮಿ ಅವರಿಗೆ ಈಗ ಮನೆಯಿಂದ ಹೇಗೆ ಹೊರಗೆ ಬರುವುದು ಎನ್ನುವುದೇ ಚಿಂತೆ. ರಸ್ತೆಯನ್ನು ಸುಸ್ಥಿತಿಗೆ ತರುವ ಹೆಸರಿನಲ್ಲಿ ಹಾಕಲಾಗಿರುವ ಕಾಂಕ್ರಿಟ್ ಸ್ಲ್ಯಾಬ್ ಅವರಿಗೀಗ ಅಡಚಣೆಯಾಗಿ ಪರಿಣಮಿಸಿದೆ. ‘ಈಗ ಅಮ್ಮನನ್ನು ಹೊರಗೆ ಕರೆದುಕೊಂಡು ಹೋಗಲು ರಸ್ತೆಯ ಕೆಳಭಾಗದಲ್ಲಿ ಒಂದಿಷ್ಟು ಕಲ್ಲುಗಳನ್ನು ಹಾಕಿ, ಕಾರನ್ನು ಹೊರಕ್ಕೆ ತೆಗೆದು ರಸ್ತೆ ಸೇರುವಂತೆ ಮಾಡುತ್ತೇನೆ’ ಎಂದು ವಿವರಿಸುತ್ತಾರೆ, ಅವರ ಪುತ್ರ, ನಿವೃತ್ತ ನ್ಯೂರೋಸರ್ಜನ್ ಡಾ. ವಿಕ್ರಮ್ ಕಶ್ಯಪ.
‘ಗುಂಡಿಬಿದ್ದ ರಸ್ತೆಗಳು ನಗರದಲ್ಲಿ ಬೇಕಾದಷ್ಟಿವೆ. ಎಲ್ಲವನ್ನೂ ಬಿಟ್ಟು ಚೆನ್ನಾಗಿದ್ದ ಈ ರಸ್ತೆಯನ್ನೇ ಏಕೆ ಕಾಮಗಾರಿಗೆ ಆಯ್ಕೆ ಮಾಡಿಕೊಂಡರು’ ಎಂದು ಅವರು ಪ್ರಶ್ನಿಸುತ್ತಾರೆ.
ಚರಂಡಿಗಳಿಲ್ಲ ರಸ್ತೆಗೆ ಪೂರಕ; ಮಳೆ ನೀರೇ ಮಾರಕ
ಯೋಜನೆಯನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ ಕಾಂಕ್ರಿಟ್ ರಸ್ತೆಗಳು ಸಹ ತಮ್ಮದೇ ಆದ ಗುಣವೈಶಿಷ್ಟ್ಯ ಹೊಂದಿವೆ. ಆದರೆ, ನಗರದಲ್ಲಿ ಈ ಕಾಮಗಾರಿ ಅವೈಜ್ಞಾನಿಕವಾಗಿ ಅನುಷ್ಠಾನಗೊಳ್ಳುತ್ತಿದ್ದು, ಯೋಜನೆಗೆ ವ್ಯಯಿಸುತ್ತಿರುವ ಹಣ ಪೋಲಾಗುತ್ತಿದೆ ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞ ಸವೇರಿ ರಜಾಯ್.
‘ಟಾರು ರಸ್ತೆಯ ಮೇಲೆಯೇ ನೇರವಾಗಿ ಕಾಂಕ್ರಿಟ್ ಸುರಿದು, ವೈಟ್ ಟಾಪಿಂಗ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ತಳಪಾಯವನ್ನು ಅಣಿಗೊಳಿಸದೆ ಹೀಗೆ ಕಾಮಗಾರಿ ನಡೆಸುತ್ತಿರುವುದನ್ನು ನಾನು ನೋಡಿದ್ದು ಇದೇ ಮೊದಲು’ ಎಂದು ಅವರು ಹೇಳುತ್ತಾರೆ.
ಆಕ್ಸ್‌ಫರ್ಡ್ ಬ್ರೂಕ್ಸ್ ವಿಶ್ವವಿದ್ಯಾಲಯದಲ್ಲಿ ವಾಸ್ತುಶಾಸ್ತ್ರದಲ್ಲಿ ಅವರು ಪದವಿ ಪಡೆದಿದ್ದಾರೆ.
ಮಳೆನೀರು ಸಾಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ನಗರದ ರಸ್ತೆಗಳು ಬಹುಬೇಗ ಹಾಳಾಗಲು ಕಾರಣ. ಆದರೆ, ನೀರಿನ ಸರಾಗ ಹರಿವಿಗೆ ಸೌಲಭ್ಯವಿಲ್ಲದ್ದರಿಂದ ಹೊಸದಾಗಿ ಟಾರು ಹಾಕಿದ ರಸ್ತೆಗಳೂ ನಗರದಲ್ಲಿ ಹಾಳಾಗುತ್ತಿವೆ ಎಂದು ಹೇಳುತ್ತಾರೆ. ‘ವೈಟ್ ಟಾಪಿಂಗ್ ರಸ್ತೆಗಳಲ್ಲಿ ಮಳೆನೀರು ಸಾಗಲು ಸೂಕ್ತ ವ್ಯವಸ್ಥೆಯೇ ಇಲ್ಲ. ಇದ್ದ ಮೋರಿಗಳನ್ನೂ ಮುಚ್ಚಲಾಗಿದೆ’ ಎಂದು ವಾಸ್ತವ ಸನ್ನಿವೇಶಕ್ಕೆ ಕನ್ನಡಿ ಹಿಡಿಯುತ್ತಾರೆ.
‘ಒಂದು ಕಾಲಕ್ಕೆ ಅಮೆರಿಕದಲ್ಲಿ ಕಾಂಕ್ರಿಟ್ ರಸ್ತೆಗಳನ್ನೇ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ಸುರಕ್ಷತಾ ಕಾರಣಗಳಿಗಾಗಿ ಈಗ ಕಾಂಕ್ರಿಟ್ ರಸ್ತೆಗಳ ನಿರ್ಮಾಣವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಏಕೆಂದರೆ, ಬಳಕೆಯಾದಂತೆ ರಸ್ತೆಗಳ ಮೇಲ್ಮೈ ನುಣುಪಾಗುತ್ತಾ ಹೋಗುತ್ತದೆ. ಆಗ ಸಣ್ಣ ಮಳೆಯಾದರೂ ಈ ರಸ್ತೆಗಳು ತುಂಬಾ ಜಾರುತ್ತವೆ’ ಎಂದು ಹೇಳುತ್ತಾರೆ.
ಸರಿಯಾದ ತಳಪಾಯ ಇಲ್ಲದಿರುವ ಕಾರಣ ರಸ್ತೆ ಮೇಲಿನ ಕಾಂಕ್ರಿಟ್ ಬಿರುಕು ಬಿಡುವ ಎಲ್ಲ ಸಾಧ್ಯತೆಗಳಿವೆ. ಇಲ್ಲಿನ ಕಾಂಕ್ರಿಟ್ ರಸ್ತೆಗಳು ಬಿಳಿಬಣ್ಣದಿಂದ ಕೂಡಿವೆ.
ಬೆಳಕು ಪ್ರತಿಫಲನಗೊಂಡು ಚಾಲಕರ ಕಣ್ಣು ಕುಕ್ಕಬಾರದೆಂದು ವಿದೇಶಗಳಲ್ಲಿ ಕಾಂಕ್ರಿಟ್ ರಸ್ತೆಗಳಿಗೆ ಕಪ್ಪು ಬಣ್ಣ ಬಳಿದು ಬೆಳಕಿನ ತೀವ್ರತೆ ಕಡಿಮೆ ಮಾಡಲಾಗಿರುತ್ತದೆ. ಆದರೆ, ಇಲ್ಲಿ ತದ್ವಿರುದ್ಧ ಹಾದಿ ತುಳಿಯಲಾಗಿದೆ ಎಂದು ವಿಶ್ಲೇಷಿಸುತ್ತಾರೆ.
ವೈಟ್ ಟಾಪಿಂಗ್ ಕಾಮಗಾರಿಗಿಂತ ಮುಂಚೆ ರಸ್ತೆ ಪಕ್ಕದ ಕಟ್ಟಡಗಳು ಎತ್ತರದ ಪ್ರದೇಶದಲ್ಲಿ ಇರುತ್ತಿದ್ದವು. ಬಿದ್ದ ಮಳೆನೀರು ರಸ್ತೆ ಮತ್ತು ಚರಂಡಿಗಳಲ್ಲಿ ಹರಿದು ಹೋಗುತ್ತಿತ್ತು. ಕಾಂಕ್ರಿಟ್ ಗಾತ್ರ 20 ಸೆಂಟಿ ಮೀಟರ್‌ನಷ್ಟು ದಪ್ಪವಾಗಿದ್ದು, ಹಲವು ಕಟ್ಟಡಗಳು ರಸ್ತೆಯ ಮೇಲ್ಮೈಗಿಂತಲೂ ತಗ್ಗಿನಲ್ಲಿವೆ. ಹೀಗಾಗಿ ಬಿದ್ದ ಮಳೆನೀರು ಇನ್ನು ನೇರವಾಗಿ ಕಟ್ಟಡಗಳಿಗೆ ನುಗ್ಗಲಿದ್ದು, ಜನ ಸಂಕಷ್ಟ ಅನುಭವಿಸುವುದು ಅನಿವಾರ್ಯ.
***
ಚೆನ್ನಾಗಿದ್ದ ರಸ್ತೆಯನ್ನು ವೈಟ್ ಟಾಪಿಂಗ್ ಹೆಸರಿನಲ್ಲಿ ಕಿತ್ತು ಹಾಕಿದ್ದಾರೆ. ನಮ್ಮಲ್ಲಿ ಹೆಚ್ಚು ಜನ ದೂರದ ಪ್ರದೇಶಗಳ ಉದ್ಯೋಗಿಗಳು. ಅವರಿಗೆ ಸ್ವಂತ ವಾಹನ ಬಳಸಬೇಕಾದ ಅನಿವಾರ್ಯತೆಯಿದೆ. ಈಗ ರಸ್ತೆಯನ್ನೂ ಬಂದ್ ಮಾಡಿ, ಮನೆಯ ಗೇಟ್‌ಗಳನ್ನೂ ಬಂದ್ ಮಾಡಿದರೆ ಓಡಾಡುವುದಾದರೂ ಹೇಗೆ?
–ರವಿ, ಕೃಷ್ಣರಾವ್ ಪಾರ್ಕ್ ಬಳಿಯ ನಿವಾಸಿ
ಕಾಮಗಾರಿ ಆರಂಭವಾದಂದಿನಿಂದ ಇಲ್ಲಿ ಸುರಕ್ಷತೆ ಇಲ್ಲವಾಗಿದೆ. ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಹಿರಿಯ ನಾಗರಿಕರು ಇದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆಗಳು ಉಂಟಾದಾಗ ಇಲ್ಲಿಗೆ ವಾಹನ ಬರಲು ಸಾಧ್ಯವಿಲ್ಲವಾಗಿದೆ. ವೈಟ್ ಟಾಪಿಂಗ್‌ನಿಂದ ಏನಾದರೂ ಬದಲಾವಣೆ ಆದೀತು ಎಂದು ಅನಿಸುತ್ತಿಲ್ಲ.
–ಸರಸ್ವತಿ, ಬಸವನಗುಡಿ ನಿವಾಸಿ
***
– ಕಾಲಮಿತಿಯಲ್ಲಿ ಕಾಮಗಾರಿ ಮುಗಿಸದ ಕಾರಣ ದಟ್ಟಣೆ ಸಮಸ್ಯೆ ಹೆಚ್ಚಾಗುತ್ತಿದ್ದು, ಬಿಬಿಎಂಪಿ ಮತ್ತು ಪೊಲೀಸರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಹೊಸ ಕಾಮಗಾರಿಗೆ ಅನುಮತಿ ನೀಡಲು ಪೊಲೀಸ್ ಇಲಾಖೆ ಹಿಂದೆ–ಮುಂದೆ ನೋಡುತ್ತಿದೆ
– ಕಾಂಕ್ರಿಟ್ ರಸ್ತೆಗಳು ದಿನ ಕಳೆದಂತೆ ಹೆಚ್ಚು ನುಣುಪಾಗುವ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ರಸ್ತೆಗಳ ಮೇಲೆ ತೈಲವೇನಾದರೂ ಬಿದ್ದರೆದ್ವಿಚಕ್ರವಾಹನ ಸವಾರರ ಜೀವಕ್ಕೆ ಕಂಟಕ ಎನ್ನುವುದು ಅವರ ಎಚ್ಚರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.