ADVERTISEMENT

ಬಾಲಕ ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್‌ನಿಂದ ಇ–ಮೇಲ್

ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಮೇ 2022, 16:31 IST
Last Updated 23 ಮೇ 2022, 16:31 IST

ಬೆಂಗಳೂರು: ನಗರದ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ತಮಿಳುನಾಡಿನ ಬಾಲಕನೊಬ್ಬ ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್‌ನಿಂದ ಇ–ಮೇಲ್ ಬಂದಿರುವ ಮಾಹಿತಿಯನ್ನು ಕಲೆಹಾಕಿದ್ದಾರೆ.

20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿ ಇ–ಮೇಲ್‌ ಸಂದೇಶಗಳು ಬಂದಿದ್ದವು. ಆಯಾ ಠಾಣೆ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ತನಿಖೆಗೆಂದು ಪೊಲೀಸರ ವಿಶೇಷ ತಂಡ ರಚಿಸಲಾಗಿದೆ.

‘ಇ–ಮೇಲ್ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ತಮಿಳುನಾಡಿನ 17 ವರ್ಷದ ಬಾಲಕ ಅಭಿವೃದ್ಧಿಪಡಿಸಿದ್ದ ಹೊಸ ಸಾಫ್ಟ್‌ವೇರ್‌ನಿಂದ ಇ–ಮೇಲ್‌ಗಳು ಬಂದಿರುವುದು ಗೊತ್ತಾಗಿದೆ. ತಮಿಳುನಾಡಿಗೆ ಹೋಗಿರುವ ಕೆಲ ಪೊಲೀಸರು, ಮತ್ತಷ್ಟು ಮಾಹಿತಿ ಕಲೆಹಾಕುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಭೋಪಾಲ್‌ನ ಶಾಲೆಗಳಿಗೂ ಬೆದರಿಕೆ: ‘ಬೆಂಗಳೂರು ಮಾತ್ರವಲ್ಲದೇ ಮಧ್ಯಪ್ರದೇಶದ ಭೋಪಾಲ್‌ನ ಕೆಲ ಶಾಲೆಗಳಿಗೂ ಬಾಂಬ್ ಬೆದರಿಕೆ ಸಂದೇಶಗಳು ಬಂದಿವೆ. ಎಲ್ಲ ಸಂದೇಶಗಳು ಪರಸ್ಪರ ಹೋಲಿಕೆಯಾಗುತ್ತಿದ್ದು, ಒಂದೇ ಕಡೆಯಿಂದ ಬಂದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬಾಲಕ, ತಾನು ಅಭಿವೃದ್ಧಿಪಡಿಸಿದ್ದ ಸಾಫ್ಟ್‌ವೇರ್ ಮಾರಾಟ ಮಾಡಿದ್ದು, ವಿದೇಶಿ ಪ್ರಜೆಯೊಬ್ಬರು ಸಾಫ್ಟ್‌ವೇರ್ ಖರೀದಿಸಿರುವುದಾಗಿ ಗೊತ್ತಾಗಿದೆ. ಅದೇ ಪ್ರಜೆ ಬೆದರಿಕೆ ಸಂದೇಶ ಕಳುಹಿಸಿರುವ ಅನುಮಾನವಿದ್ದು, ಅವರ ಬಗ್ಗೆ ಮಾಹಿತಿ ಸಿಗಬೇಕಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.