ADVERTISEMENT

ಶೇ 94ರಷ್ಟು ಪೂರ್ಣ: ಹೈಕೋರ್ಟ್‌ಗೆ ಮಾಹಿತಿ

ಬಿಬಿಎಂಪಿ ವ್ಯಾಪ್ತಿ–ಬಿಟ್ಟ ಮಕ್ಕಳ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:43 IST
Last Updated 6 ಡಿಸೆಂಬರ್ 2021, 16:43 IST

ಬೆಂಗಳೂರು: ‘ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಬಗ್ಗೆ ನಿಖರ ಮಾಹಿತಿ ಕಲೆ ಹಾಕಲು ನಡೆಸಲಾಗುತ್ತಿರುವ ಸಮೀಕ್ಷಾ ಕಾರ್ಯ ಶೇ 94ರಷ್ಟು ಪೂರ್ಣಗೊಂಡಿದೆ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಹೈಕೋರ್ಟ್‌ಗೆ ತಿಳಿಸಿದೆ.

ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಮಿಕಸ್ ಕ್ಯೂರಿ (ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಹಿರಿಯ ವಕೀಲ ಕೆ.ಎನ್.ಫಣೀಂದ್ರ, ‘ಬಿಬಿಎಂಪಿ ವ್ಯಾಪ್ತಿಯಲ್ಲಿನ ಸಮೀಕ್ಷೆ ಕಾರ್ಯ ಸದ್ಯ 94ರಷ್ಟು ಪೂರ್ಣಗೊಂಡಿದೆ. ಬಿಬಿಎಂಪಿ ವರದಿ ನೀಡಿದ ನಂತರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.ಈ ವಿವರಣೆಯನ್ನು ಅನುಮೋದಿಸಿದಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ‘ನಗರದಲ್ಲಿನ ಮನೆ-ಮನೆ ಸಮೀಕ್ಷೆ ಶೇ 94.8ಷ್ಟು ಮುಕ್ತಾಯವಾಗಿದೆ’ ಎಂದರು.

ADVERTISEMENT

ಹಿರಿಯ ವಕೀಲೆ ಜಯ್ನಾ ಕೊಠಾರಿ, ‘ಬಿಬಿಎಂಪಿ ನೀಡಿರುವ ಪ್ರಾಥಮಿಕ ಅಂಕಿಅಂಶಗಳ ಪ್ರಕಾರ 10 ಲಕ್ಷ ಶಾಲಾ ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ 5 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನಲಾಗಿದೆ. ಈ ಸಂಗತಿ ನಿಜವೇ ಆಗಿದ್ದಲ್ಲಿ ಅವರನ್ನು ಶಾಲೆಗೆ ವಾಪಸ್ ಕರೆತರಲು ಗಂಭೀರ ಕ್ರಮ ಕೈಗೊಳ್ಳುವ ಅಗತ್ಯವಿದೆ’ ಎಂದರು. ಪಾಲಿಕೆ ಪರ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಸಮೀಕ್ಷೆಯನ್ನು ಪೂರ್ಣಗೊಳಿಸಲು ಬಿಬಿಎಂಪಿಗೆ ಕಾಲಾವಕಾಶ ನೀಡಿ, ವಿಚಾರಣೆಯನ್ನು 2022ರ ಫೆಬ್ರುವರಿಗೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.