ADVERTISEMENT

ಸೆಲ್ಫಿ ಹುಚ್ಚಿಗೆ ಮೂವರು ಬಲಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:16 IST
Last Updated 15 ಅಕ್ಟೋಬರ್ 2018, 19:16 IST

ದಾಬಸ್‌ಪೇಟೆ: ಹಳೇ ನಿಜಗಲ್ ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸೋಮವಾರ ಮೃತಪಟ್ಟಿದ್ದಾರೆ. ತುಮಕೂರಿನ ಸಿದ್ದಂಗಂಗಾ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಪೂರ್ಣಚಂದ್ರ (18), ಶಶಾಂಕ್ (17) ಹಾಗೂ ಮೊಹಮ್ಮದ್ ಮೂರ್ತಜ್ (17) ಮೃತಪಟ್ಟವರು.

ಶಶಾಂಕ್ ಕ್ಯಾತ್ಸಂದ್ರದ ಸದಾಶಿವನಗರ, ಮೊಹಮ್ಮದ್ ಮೂರ್ತಜ್ ತುರುವೇಕೆರೆ ಮತ್ತು ಪೂರ್ಣಚಂದ್ರ ಅಂತರಸಹಳ್ಳಿ ಬಳಿಯ ಯಲ್ಲಾಪುರದವರು.
ಕಾಲೇಜಿನಿಂದ ಇದೇ ತಿಂಗಳ 10ರಿಂದ ದೇವರ ಹೊಸಹಳ್ಳಿ ಗ್ರಾಮದಲ್ಲಿ ಎನ್‌ಎಸ್ಎಸ್ ಶಿಬಿರ ಏರ್ಪಡಿಸಲಾಗಿತ್ತು. 31 ವಿದ್ಯಾರ್ಥಿಗಳು ಮತ್ತು 20 ವಿದ್ಯಾರ್ಥಿನಿಯರು ಸೇರಿ 51 ಮಂದಿ ಭಾಗವಹಿಸಿದ್ದರು.

ಸೋಮವಾರ ಬೆಳಿಗ್ಗೆ 10ಕ್ಕೆ ತಿಂಡಿ ತಿಂದು, ಹಳೇ ನಿಜಗಲ್ ಬಳಿಯ ಕೋಡಿ ಸಿದ್ದೇಶ್ವರ ದೇವಾಲಯದ ಸ್ವಚ್ಛತೆಗೆ ಎಲ್ಲಾ ವಿದ್ಯಾರ್ಥಿಗಳು 11ಕ್ಕೆ ಬಂದಿದ್ದರು. ಈ ಸಮಯದಲ್ಲಿ ಮೃತರು ಸೆಲ್ಫಿ ತೆಗೆದುಕೊಳ್ಳಲು ಕೆರೆಗೆ ಹೋಗಿದ್ದರು. ಮೊದಲಿಗೆ ಪೂರ್ಣಚಂದ್ರ ಜಾರಿ ನೀರಿಗೆ ಬಿದ್ದ. ಆತನನ್ನು ರಕ್ಷಣೆ ಮಾಡಲು ಹೋದ ಮೊಹಮ್ಮದ್ ಮೂರ್ತಜ್, ಶಶಾಂಕ್ ಕೂಡ ಬಿದ್ದರು.

ADVERTISEMENT

ಮುಳುಗುತ್ತಿದ್ದ ಇವರನ್ನು ರಕ್ಷಿಸಲು ಶಿಬಿರದ ಆಧಿಕಾರಿ ಮುಂದಾಗಿದ್ದಾರೆ. ಅವರೂ ಮುಳುಗುವ ಸ್ಥಿತಿ ನಿರ್ಮಾಣವಾಯಿತು. ಇತರ ವಿದ್ಯಾರ್ಥಿಗಳು ಶಿಬಿರದ ಆಧಿಕಾರಿಯನ್ನು ರಕ್ಷಿಸಿದರು. ಆ ವೇಳೆಗೆ ಮೊದಲು ಬಿದ್ದ ಮೂವರು ನೀರಿನಲ್ಲಿ ಮುಳುಗಿದರು.

ನೀರಿನಲ್ಲಿ ಸಿಲುಕಿದ ಶವಗಳನ್ನು ನೆಲಮಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ, ದಾಬಸ್‌ಪೇಟೆ ಪೊಲೀಸರ ಸಹಾಯದಿಂದ ಮೇಲೆತ್ತಿದರು. ದಾಬಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.