ADVERTISEMENT

‘ಶೋಧನಾ ಸಮಿತಿಗಳೇ ಪಾರದರ್ಶಕವಲ್ಲ’

ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಬಗ್ಗೆ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:54 IST
Last Updated 22 ಜುಲೈ 2019, 19:54 IST

ಬೆಂಗಳೂರು:‘ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳು ರಚಿಸುವ ಶೋಧನಾ ಸಮಿತಿಗಳೇ ಪಾರದರ್ಶಕವಾಗಿರುವುದಿಲ್ಲ. ಸಮಿತಿಯಲ್ಲಿರುವ ಸದಸ್ಯರುಗಳೇ ಪುನರ್‌ ನೇಮಕಗೊಳ್ಳುತ್ತಾರೆ. ಇಂತಹ ಅಂಶಗಳ ಕುರಿತು ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ’ ಎಂದು ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳ ವೇದಿಕೆಯ ಜಂಟಿ ಕಾರ್ಯದರ್ಶಿ ಡಾ. ಓ. ಅನಂತರಾಮಯ್ಯ ಹೇಳಿದರು.

ವೇದಿಕೆ ವತಿಯಿಂದ ನಗರದಲ್ಲಿ ನಡೆದರಾಷ್ಟ್ರೀಯ ಶಿಕ್ಷಣ ನೀತಿ (ಡಾ. ಕಸ್ತೂರಿ ರಂಗನ್‌ ವರದಿ) ಕರಡು ಸಭೆಯಲ್ಲಿ ಮಾತನಾಡಿದ ಅವರು, ‘ನೂತನ ಶಿಕ್ಷಣ ನೀತಿಯಲ್ಲಿ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕೆಲಸವಾಗಬೇಕು. ಎಲ್ಲ ಹಂತಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಪ್ರವೇಶ, ಶಿಕ್ಷಕರ ನೇಮಕಾತಿಯಲ್ಲಿ ಕಡ್ಡಾಯ ಮೀಸಲಾತಿ ನೀತಿ ಪಾಲಿಸಬೇಕು’ ಎಂದರು.

‘ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಕೃಷಿ, ಡಿಪ್ಲೊಮಾ ಸೇರಿದಂತೆ ಎಲ್ಲ ಕೋರ್ಸ್‍ಗಳಿಗೆ ಪ್ರಮಾಣ ಪತ್ರ ನೀಡುವುದರಿಂದ, ಜೊತೆಗೆ ಕಾಲೇಜುಗಳಿಗೇ ಪದವಿ ಪ್ರಮಾಣ ಪತ್ರ ನೀಡುವ ಅರ್ಹತೆಯಿದೆ ಎನ್ನುವ ಅಂಶದಿಂದ ಅವುಗಳ ಮೌಲ್ಯ ಕುಸಿಯುತ್ತಿದೆ. ವಿಶ್ವವಿದ್ಯಾಲಯಗಳೇ ಪ್ರಮಾಣ ಪತ್ರ ನೀಡಬೇಕು’ ಎಂದರು.

ADVERTISEMENT

ಬಿಜೆಪಿ ಮುಖಂಡ ಬಿ. ಸೋಮಶೇಖರ್‌, ‘ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಿಂದ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ಶೈಕ್ಷಣಿಕ ಅಭಿವೃದ್ಧಿಯಾಗಬಹುದು. ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದರೆ ಆರ್ಥಿಕ, ಸಾಮಾಜಿಕ ಪರಿವರ್ತನೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.