ADVERTISEMENT

ಲೈಂಗಿಕ ಕಿರುಕುಳ: ಓಲಾ ಚಾಲಕ ಸೆರೆ

ಕ್ಯಾಬ್‌ನಲ್ಲೇ ಯುವತಿಯನ್ನು ಅಪಹರಿಸಿದ್ದ *ಚಿಕ್ಕಜಾಲ ಪೊಲೀಸರಿಂದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 19:37 IST
Last Updated 5 ಜುಲೈ 2018, 19:37 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಓಲಾ ಕ್ಯಾಬ್‌ ಹತ್ತಿದ್ದ ಯುವತಿಯನ್ನು ಅಪಹರಿಸಿದ್ದ ಕ್ಯಾಬ್‌ ಚಾಲಕ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

‘ಘಟನೆ ಸಂಬಂಧ 25 ವರ್ಷದ ಯುವತಿ, ಚಿಕ್ಕಜಾಲ ಠಾಣೆಗೆ ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ, ಅಪಹರಣ ಹಾಗೂ ಪಾನಮತ್ತ ಚಾಲನೆ ಆರೋಪದಡಿ ಚಾಲಕ ಸುರೇಶ್‌ ಎಂಬಾತನನ್ನು ಬಂಧಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಂಧ್ರಪ್ರದೇಶದ ಸುರೇಶ್, ವರ್ಷದ ಹಿಂದಷ್ಟೇ ನಗರಕ್ಕೆ ಬಂದಿದ್ದ. ಸುಬ್ಬಯ್ಯನಪಾಳ್ಯದಲ್ಲಿ ವಾಸವಿದ್ದುಕೊಂಡು, ಕ್ಯಾಬ್‌ ಓಡಿಸುತ್ತಿದ್ದಾನೆ. ಆತನ ಪೂರ್ವಾಪರದ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.

ADVERTISEMENT

ಯಲಹಂಕದಲ್ಲಿ ವಾಸವಿರುವ ಸಂತ್ರಸ್ತೆ, ಖಾಸಗಿ ಕಂಪನಿಯೊಂದರ ಉದ್ಯೋಗಿ. ಹೊರ ರಾಜ್ಯಕ್ಕೆ ಹೊರಟಿದ್ದ ಅವರು, ಗುರುವಾರ ನಸುಕಿನಲ್ಲಿ ಪ್ರಯಾಣಿಸಲು ವಿಮಾನ ಟಿಕೆಟ್‌ ಕಾಯ್ದಿರಿಸಿದ್ದರು. ವಿಮಾನ ನಿಲ್ದಾಣಕ್ಕೆ ತೆರಳಲು ಓಲಾ ಕ್ಯಾಬ್‌ ಹತ್ತಿದ್ದರು.

‘ರಾತ್ರಿ 1.30ರ ಸುಮಾರಿಗೆ ಬಳ್ಳಾರಿ ರಸ್ತೆಯಲ್ಲಿರುವ ಮೊದಲನೇ ಟೋಲ್‌ ದಾಟಿದ್ದ ಚಾಲಕ ವಿಮಾನ ನಿಲ್ದಾಣದತ್ತ ಹೋಗುವ ಬದಲು ಹೈದರಾಬಾದ್‌ ರಸ್ತೆಯತ್ತ ಕಾರು ತಿರುಗಿಸಿದ್ದ’

‘ಮಾರ್ಗ ಬದಲಿಸಿದ್ದನ್ನು ಪ್ರಶ್ನಿಸಿದ್ದ ಸಂತ್ರಸ್ತೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಹೋಗುವಂತೆ ಒತ್ತಾಯಿಸಿದ್ದರು. ಆಗ ಆರೋಪಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಕಾರುಗಳ ಬಾಗಿಲುಗಳನ್ನು ಲಾಕ್‌ ಮಾಡಿ ಕೈಹಿಡಿದು ಎಳೆದಾಡಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಟೋಲ್‌ ಸಿಬ್ಬಂದಿ ಹಿಡಿದುಕೊಟ್ಟರು: ‘ಚಿಕ್ಕಜಾಲ ಟೋಲ್‌ಗೇಟ್‌ನಲ್ಲಿ ಶುಲ್ಕ ಪಾವತಿಸಲೆಂದು ಆರೋಪಿ ಕ್ಯಾಬ್‌ ನಿಲ್ಲಿಸಿದ್ದ. ಟೋಲ್ ಸಿಬ್ಬಂದಿಯನ್ನು ಕಂಡ ಸಂತ್ರಸ್ತೆ, ಸಹಾಯಕ್ಕಾಗಿ ಕೂಗಾಡಿದ್ದರು. ಚಾಲಕನನ್ನು ಕಾರಿನಿಂದ ಕೆಳಗೆ ಇಳಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂತು.

ಕೂಡಲೇ ಸ್ಥಳಕ್ಕೆ ಹೋದ ಗಸ್ತು ಸಿಬ್ಬಂದಿ ಆರೋಪಿಯನ್ನು ಠಾಣೆಗೆ ಕರೆತಂದರು. ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದರು.

ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ಮಾಡಿಸಲಾಯಿತು. ಆತನ ದೇಹದಲ್ಲಿ ಮದ್ಯದ ಅಂಶವಿರುವುದು ಖಾತ್ರಿಯಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

‘ಸಿಬ್ಬಂದಿ ಇರದಿದ್ದರೆ, ಮಾನ– ಪ್ರಾಣಕ್ಕೆ ಕುತ್ತು’
‘ಟೋಲ್‌ಗೇಟ್‌ ಸಿಬ್ಬಂದಿ ನನ್ನ ಜೀವ ಉಳಿಸಿದರು. ಅವರು ಇರದಿದ್ದರೆ, ನನ್ನ ಮಾನ ಹಾಗೂ ಪ್ರಾಣಕ್ಕೆ ಕುತ್ತು ಬರುತ್ತಿತ್ತು’ ಎಂದು ಸಂತ್ರಸ್ತೆ ಹೇಳಿಕೊಂಡಿರುವುದಾಗಿ ಪೊಲೀಸರು ಹೇಳಿದರು.

‘ಒಬ್ಬಂಟಿಯಾಗಿ ಲಗೇಜ್‌ ಸಮೇತ ಕ್ಯಾಬ್‌ ಹತ್ತಿದ್ದೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಚಾಲಕನ ವರ್ತನೆ ಬದಲಾಯಿತು. ನನ್ನನ್ನು ಕೆಟ್ಟದಾಗಿ ನೋಡಲಾರಂಭಿಸಿದ್ದ ಆತ, ಬಾಗಿಲುಗಳನ್ನು ಬಂದ್ ಮಾಡಿದ್ದ. ಅವಾಗಲೇ, ನನಗೆ ಭಯ ಶುರುವಾಯಿತು’ ಎಂದಿದ್ದಾರೆ.

‘ನಿಲ್ದಾಣಕ್ಕೆ ಹೋಗಬೇಕಿದ್ದ ಆತ, ಹೈದರಾಬಾದ್‌ ರಸ್ತೆಯತ್ತ ನನ್ನನ್ನು ಕರೆದೊಯ್ಯುತ್ತಿದ್ದ. ಎಷ್ಟೇ ಕೂಗಾಡಿದರೂ ಕ್ಯಾಬ್‌ ನಿಲ್ಲಿಸಿರಲಿಲ್ಲ. ಟೋಲ್‌ಗೇಟ್‌ ಸಿಬ್ಬಂದಿ ನನ್ನನ್ನು ರಕ್ಷಿಸಿದಾಗಲೇ, ಹೋದ ಜೀವ ಮರಳಿ ಬಂದಂತಾಯಿತು’ ಎಂದು ಹೇಳಿರುವುದಾಗಿ ಪೊಲೀಸರು ವಿವರಿಸಿದರು.

ಓಲಾ ಕ್ಯಾಬ್‌ ಕಂಪನಿಗೆ ನೋಟಿಸ್‌
ಜೀವನ್‌ಬಿಮಾ ನಗರ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗಷ್ಟೇ ಓಲಾ ಕ್ಯಾಬ್ ಚಾಲಕನೊಬ್ಬ, ಮಹಿಳಾ ಪ್ರಯಾಣಿಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಜಿ.ಪರಮೇಶ್ವರ, ‘ಪ್ರತಿಯೊಂದು ಕ್ಯಾಬ್‌ನಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಿ’ ಎಂದು ಕಂಪನಿಯ ಪ‍್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದರು. ಅದರ ಬಳಿಕವೂ ಕ್ಯಾಬ್‌ ಚಾಲಕ, ಯುವತಿಯನ್ನು ಅಪಹರಿಸಲು ಯತ್ನಿಸಿದ್ದಾನೆ. ಹೀಗಾಗಿ, ಚಿಕ್ಕಜಾಲ ಪೊಲೀಸರು ಓಲಾ ಕ್ಯಾಬ್ ಕಂಪನಿಗೆ ನೋಟಿಸ್‌ ನೀಡಿದ್ದಾರೆ.

’ಚಾಲಕರ ಪೂರ್ವಾಪರದ ಬಗ್ಗೆ ಪೊಲೀಸರ ಪರಿಶೀಲನಾ ಪ್ರಮಾಣ ಪತ್ರ ಅಗತ್ಯ. ಅಂಥ ಪತ್ರವುಳ್ಳ ಚಾಲಕರನ್ನು ಮಾತ್ರ ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು. ಈ ನಿಯಮವನ್ನು ಕಂಪನಿ ಪಾಲಿಸುತ್ತಿಲ್ಲ. ಅದರಿಂದಾಗಿ, ಚಿಕ್ಕಜಾಲದಲ್ಲಿ ಈ ಘಟನೆ ನಡೆದಿದೆ. ಕಂಪನಿಗೆ ನೋಟಿಸ್‌ ಕೊಟ್ಟಿದ್ದೇವೆ. ಅದರ ಪ್ರತಿನಿಧಿಗಳನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಓಲಾ ಕಂಪನಿ ಪ್ರತಿನಿಧಿ, ‘ತಪ್ಪಿತಸ್ಥ ಚಾಲಕನ ಕ್ಯಾಬ್‌ ಅನ್ನು ಕಂಪನಿಯಿಂದ ತೆಗೆದುಹಾಕಿದ್ದೇವೆ. ಸಂತ್ರಸ್ತೆಯೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ನಮ್ಮ ಸಹಕಾರ ನೀಡುತ್ತಿದ್ದೇವೆ. ಪೊಲೀಸರಿಗೂ ಎಲ್ಲ ಮಾಹಿತಿ ನೀಡಿ ತನಿಖೆಗೆ ಸಹಕರಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.